ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾರಾಮ್, ಅಭಿಷೇಕ್‍

Social Share

ಬೆಂಗಳೂರು, ಅ.3- ಚಂದನವನದಲ್ಲಿ ಇಂದು ಮತ್ತೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ 30ನೆ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರೆ, ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಅವರು 28ನೆ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ.

ತಮ್ಮ ನೆಚ್ಚಿನ ನಟ ಹಾಗೂ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಲೆಂದೇ ನಿನ್ನೆ ಮಧ್ಯರಾತ್ರಿಯೇ ರಾಜೇಶ್ವರಿನಗರದ ರಚಿತಾರಾಮ್ ಮತ್ತು ಜಯನಗರದ ಅಭಿಷೇಕ್ ಅಂಬರೀಷ್ ಅವರ ಮನೆಗಳ ಮುಂದೆ ಅಭಿಮಾನಿಗಳು ಹೂವು, ವಿವಿಧ ಮಾದರಿಯ ಕೇಕ್‍ಗಳೊಂದಿಗೆ ಜಮಾಯಿಸಿದ್ದರು.

ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಫೋಟೋ ತೆಗೆಸಿಕೊಳ್ಳುವ ಮೂಲಕ ರಚಿತಾರಾಮ್ ಹಾಗೂ ಅಭಿಷೇಕ್ ಅಂಬರೀಷ್ ಅವರು ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಡಿಂಪಲ್ ಕ್ವೀನ್ ಹಾಗೂ ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅವರಿಗೆ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಅರಸಿ ಧಾರಾವಾಹಿಯಿಂದ ಗಮನ ಸೆಳೆದು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್‍ಬುಲ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ರಚಿತಾರಾಮ್ ಹಿರಿಯ ಹಾಗೂ ಕಿರಿಯ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಪಾಲಿನ ಬುಲ್ ಬುಲ್ , ಡಿಂಪಲ್ ಕ್ವೀನ್ ಆಗಿಯೇ ಗುರುತಿಸಿಕೊಂಡಿದ್ದಾರೆ.

ಬುಲ್‍ಬುಲ್, ಅಂಬರೀಷ, ಚಕ್ರವ್ಯೂಹ, ರನ್ನ, ಆಯುಷ್ಮಾನ್‍ಭವದಂತಹ ಹಲವು ಸಿನಿಮಾಗಳಲ್ಲಿ ನಟಿಸಿರುವ ರಚಿತಾರಾಮ್ ನಟನೆಯ ಇತ್ತೀಚಿನ ಸಿನಿಮಾ ಮಾನ್ಸೂನ್ ರಾಗ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿದ್ದಲ್ಲದೆ ತೆಲುಗು ಸಿನಿಮಾರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಚಿತಾರಾಮ್ ಅವರು ಮ್ಯಾಟ್ನಿ, ವೀರಂ, ಬ್ಯಾಡ್‍ಮ್ಯಾನರ್ಸ್, ಶಬರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

# ಅಭಿಷೇಕ್‍ಗೆ ಟೀಸರ್ ಕೊಡುಗೆ:
ಅಭಿಷೇಕ್ ಅಂಬರೀಷ್ ಅವರು ಕೂಡ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ನಿನ್ನೆ ಮಧ್ಯರಾತ್ರಿಯೇ ಜಯನಗರದಲ್ಲಿರುವ ರೆಬೆಲ್ ಅಂಬರೀಷ್ ಮನೆ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಅಭಿಷೇಕ್‍ರ ಹುಟ್ಟುಹಬ್ಬದ ಅಂಗವಾಗಿ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್' ಸಿನಿಮಾ ತಂಡವು ರಗಡ್ ಟೀಸರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅಮರ್ ಸಿನಿಮಾದಲ್ಲಿ ಲವ್ಲಿಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್ ಬ್ಯಾಡ್ ಮ್ಯಾನರ್ಸ್’ನಲ್ಲಿ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿರುವುದಲ್ಲದೇ ಮಾಸ್ ಡೈಲಾಗ್ ಹೊಡೆಯುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಟೀಸರ್‍ನಲ್ಲಿರುವ ಐಡಿಯಾ ಸೃಷ್ಟಿ ಮಾಡಿದವನು ಸತ್ತರೂ ಪರವಾಗಿಲ್ಲ ಐಡಿಯಾ ಸಾಯಲ್ಲ...',ವ್ಯವಸ್ಥೆ ತಪ್ಪಲ್ಲ… ಮನುಷ್ಯನ ಯೋಚನೆ ತಪ್ಪು…’ ಎಂಬ ರಾ ಡೈಲಾಗ್‍ಗಳು ಗಮನ ಸೆಳೆಯುತ್ತಿದೆ. ಅಭಿಷೇಕ್ ಅಂಬರೀಷ್ ಅವರು ಮುಂಗಾರುಮಳೆ ಸಿನಿಮಾ ಖ್ಯಾತಿಯ ಕೃಷ್ಣ ನಿರ್ದೇಶನದ ಕಾಳಿ',ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್‍ಕುಮಾರ್ ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿ ನಟಿಸುತ್ತಿದ್ದಾರೆ.

ಅಂದಹಾಗೆ `ಬ್ಯಾಡ್‍ಮ್ಯಾನರ್ಸ್’ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್‍ರೊಂದಿಗೆ ರಚಿತಾರಾಮ್ ಕೂಡ ನಟಿಸುತ್ತಿರುವುದು ವಿಶೇಷವಾಗಿದೆ.

Articles You Might Like

Share This Article