ಮಧ್ಯಂತರ ಚುನಾವಣೆ ತಯಾರಿಯಲ್ಲಿದ್ದಾರೆ ಕೊಪ್ಪಳ ಶಾಸಕ ರಾಘವೇಂದ್ರ ಇಟ್ನಾಳ್..!
ಕೊಪ್ಪಳ, ಜು.4- ಮಧ್ಯಂತರ ಚುನಾವಣೆಯ ತಯಾರಿ ನಡೆದಿದೆಯೇ..? ಅಂತಹ ಒಂದು ಸಿದ್ಧತೆ ಕೊಪ್ಪಳ ಕ್ಷೇತ್ರದಲ್ಲಿ ಜೋರಾದಂತೆ ಕಂಡುಬಂದಿದೆ.
ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಘವೇಂದ್ರ ಇಟ್ನಾಳ್ ತಮ್ಮ ಆರು ವರ್ಷದ ಸಾಧನೆಯ ಬ್ಯಾನರ್, ಬಂಟಿಂಗ್ಸ್ಗಳನ್ನು ನಗರದ ತುಂಬೆಲ್ಲ ಅಳವಡಿಸಿದ್ದಾರೆ.
ಎಲ್ಲ ಬ್ಯಾನರ್ಗಳಲ್ಲಿ ಸಿದ್ದರಾಮಯ್ಯನವರ ಭಾವಚಿತ್ರಗಳು, ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ರಾರಾಜಿಸುತ್ತಿವೆ. ಪ್ರಸ್ತುತ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಿದ್ದರೂ ಏಕಾಏಕಿ ನಗರದ ತುಂಬೆಲ್ಲ ಫ್ಲಕ್ಸ್, ಬ್ಯಾನರ್ಗಳು ರಾರಾಜಿಸುತ್ತಿರುವುದನ್ನು ಗಮನಿಸಿರುವ ಕ್ಷೇತ್ರದ ಜನ ಮಧ್ಯಂತರ ಚುನಾವಣೆ ಏನಾದರೂ ಬರಬಹುದೇನೋ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕಾಡತೊಡಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವು ಶಾಸಕರು ರಾಜೀನಾಮೆ ನೀಡುವ ಹಾದಿಯಲ್ಲಿದ್ದಾರೆ. ಸರ್ಕಾರ ಪತನವಾಗುತ್ತದೆ ಎಂದು ಪ್ರತಿಪಕ್ಷ ಬಿಜೆಪಿಯವರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು. ಜೆಡಿಎಸ್ ಪಕ್ಷ ಪಾದಯಾತ್ರೆ ಕಾರ್ಯಕ್ರಮ ರೂಪಿಸುತ್ತಿದೆ. ಕಾಂಗ್ರೆಸ್ ಪಕ್ಷ ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ.
ಇನ್ನು ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಕೊಪ್ಪಳದಲ್ಲಿ ಶಾಸಕರ ಸಾಧನೆಯ ಬಂಟಿಂಗ್ಸ್, ಬ್ಯಾನರ್ಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಾಗಾಗಿ ಕ್ಷೇತ್ರದ ಜನ ಮಧ್ಯಂತರ ಚುನಾವಣೆ ಏನಾದರೂ ಬರುತ್ತದೆಯೋ ಏನೋ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.