ಹಂಗಾಮಿ ಸಭಾಪತಿಯಾಗಿ ರಘುನಾಥ ರಾವ್ ಮಲ್ಕಾಪುರೆ ಅಧಿಕಾರ ಸ್ವೀಕಾರ

Spread the love

ಬೆಂಗಳೂರು,ಮೇ17- ವಿಧಾನಪರಿಷತ್‍ನ ಹಂಗಾಮಿ ಸಭಾಪತಿಯಾಗಿ ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ರಘುನಾಥ ರಾವ್ ಮಲ್ಕಾಪುರೆ ಅವರು ಇಂದು ಮಧ್ಯಾಹ್ನ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಧಾನಪರಿಷತ್‍ನ ಹಂಗಾಮಿ ಸಭಾಪತಿಯಾಗಿ ರಾಜ್ಯಪಾಲರು ರಘುನಾಥ್ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಅಧಿಕಾರ ಸ್ವೀಕರಿಸಿದರು.

ಬಸವರಾಜ ಹೊರಟ್ಟಿಯವರು ವಿಧಾನಪರಿಷತ್‍ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಭಾಪತಿ ಸ್ಥಾನ ತೆರವಾಗಿತ್ತು. ವಿಧಾನಪರಿಷತ್‍ನಲ್ಲಿ ನೂತನ ಸಭಾಪತಿ ಆಯ್ಕೆಯಾಗುವವರೆಗೂ ರಘುನಾಥ್ ಹಂಗಾಮಿ ಸಭಾಪತಿಯಾಗಿ ಇಂದಿನಿಂದ ಕಾರ್ಯ ನಿರ್ವಹಿಸಲಿದ್ದಾರೆ.

ಕಳೆದ 2012ರಿಂದ 18ರವರೆಗೆ ಹಾಗೂ 2018ರಿಂದ ಈ ತನಕ ಅವರು ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಉಪಸಭಾಪತಿ ಸ್ಥಾನವು ಖಾಲಿ ಉಳಿದಿದ್ದು, ಹೊರಟ್ಟಿ ಅವರ ರಾಜೀನಾಮೆಯಿಂದಾಗಿ ಸಭಾಪತಿ ಸ್ಥಾನವು ತೆರವಾಗಿತ್ತು.

ಅಧಿಕಾರ ಸ್ವೀಕರಿಸಿದ ಹಂಗಾಮಿ ಸಭಾಪತಿಯನ್ನು ವಿಧಾನಪರಿಷತ್‍ನ ಕಾರ್ಯದರ್ಶಿ ಮಹಾಲಕ್ಷ್ಮಿ ಸೇರಿದಂತೆ ಸಚಿವಾಲಯದ ಸಿಬ್ಬಂದಿ ಅಭಿನಂದಿಸಿದರು.

Facebook Comments