ರೈತರ ಸಮಸ್ಯೆ ಬಗೆಹರಿಸಲು ರಾಹುಲ್ ಸಲಹೆ

ನವದೆಹಲಿ,ಡಿ.1-ತಮ್ಮ ಹಕ್ಕು ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ರೈತರ ಕಷ್ಟಗಳನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡು ಅವರ ಸಮಸ್ಯೆ ನಿವಾರಣೆಗೆ ಯತ್ನಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಒತ್ತಾಯಿಸಿದ್ದಾರೆ. ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದ ಸಹಸ್ರಾರು ರೈತರು ಕಳೆದ 6 ದಿನಗಳಿಂದ ದೆಹಲಿಯ ಸಿಂಘೂ ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಟ್ವಿಟ್ ಮಾಡಿರುವ ರಾಹುಲ್ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ರೈತರ ಬೆವರಹನಿಯ ಲಾಭವನ್ನು ಪ್ರತಿಯೊಬ್ಬರು ಪಡೆದಿದ್ದಾರೆ ಅಂತವರ ಋಣ ತೀರಿಸಬೇಕಾದರೆ, ಅವರಿಗೆ ನ್ಯಾಯ ಸಲ್ಲಿಸುವುದರಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕಿಳಿದಿರುವ ರೈತರ ಮೇಲೆ ಆಶ್ರುವಾಯು ಸಿಡಿಸುವುದನ್ನು ಬಿಟ್ಟು, ರೈತರ ಸಮಸ್ಯೆ ಆಲಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ರೈತರನ್ನು ಮಾತುಕತೆಗೆ ಕರೆಯುವ ನಾಟಕವಾಡಿ ಕೃಷಿಕರಿಗೆ ಅನ್ಯಾಯ ಮಾಡುವುದನ್ನು ಬಿಟ್ಟು ಅವರ ಬೇಡಿಕೆಗಳಿಗೆ ಪ್ರಧಾನಿಗಳು ಮನ್ನಣೆ ನೀಡಲಿ ಎಂದು ರಾಹುಲ್ ಆಗ್ರಹಿಸಿದ್ದಾರೆ.