ಬಡವರ ಸುಲಿಗೆಗೆ ಜಿಎಸ್‍ಟಿ ಜಾರಿ ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಜಲೋರ್ (ರಾಜಸ್ಥಾನ), ಏ.25- ಬಡವರು, ಆರ್ಥಿಕ ದುರ್ಬಲರು, ಸಣ್ಣ ವ್ಯಾಪಾರಿಗಳನ್ನು ಸುಲಿಗೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದ್ದಾರೆ.

ರಾಜಸ್ಥಾನದ ಜಲೋರ್‍ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಎಂದಿನಂತೆ ಎನ್‍ಡಿಎ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಅವರಿಂದ ಈ ದೇಶದ ಜನರಿಗೆ ನ್ಯಾಯ ಲಭಿಸಿಲ್ಲ, ನಿರುದ್ಯೋಗ ನಿವಾರಣೆಯಾಗಿಲ್ಲ, ಬಡತನ ನಿರ್ಮೂಲನೆಯಾಗಿಲ್ಲ, ರೈತರ ಜೀವನಮಟ್ಟ ಸುಧಾರಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರಿಗೆ ನ್ಯಾಯ ಲಭಿಸುತ್ತದೆ. ಒಂದೇ ವರ್ಷದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಮೋದಿ ಈ ದೇಶದ 130 ಕೋಟಿ ಜನರಿಗಾಗಿ ಆಡಳಿತ ನಡೆಸಿಲ್ಲ. 15 ರಿಂದ 20 ಸ್ವಾರ್ಥ ಉದ್ಯಮಿಗಳಿಗಾಗಿ ಆಡಳಿತ ನಡೆಸಿ ಅವರ ಅನುಕೂಲಕ್ಕಾಗಿ ಕೃಪಾಕಟಾಕ್ಷ ತೋರಿದ್ದಾರೆ ಎಂದು ರಾಹುಲ್ ಟೀಕಿಸಿದರು.