ನವದೆಹಲಿ, ಜ.18- ಟೆಲಿಪ್ರಾಂಟರ್ ಕೂಡ ಅಷ್ಟೊಂದು ಸುಳ್ಳುಗಳನ್ನು ತಡೆದುಕೊಳ್ಳಲಾಗಲಿಲ್ಲ ಎಂದು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡಿದ್ದಾರೆ. ಡಾವೋಸ್‍ನ ವಿಶ್ವ ಆರ್ಥಿಕ ವೇದಿಕೆಯಲ್ಲಿ 5 ದಿನಗಳ ಸಮ್ಮೇಳನ ನಡೆಯುತ್ತಿದೆ. ಅದರಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರನ್ನು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಆಹ್ವಾನಿಸಲಾಗಿದೆ.
ನಿನ್ನೆ ಮೊದಲ ದಿನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಭಾರತ ಸರ್ಕಾರದ ಸಾಧನೆಗಳ ಕುರಿತು ಪ್ರಧಾನಿ ಮಾತು ಆರಂಭಿಸಿದಾಗ ಅವರ ಮುಂದಿದ್ದ ಟೆಲಿಪ್ರಾಂಟರ್ ತಾಂತ್ರಿಕ ಕಾರಣದಿಂದ ಅಡಚಣೆ ಮಾಡಿದೆ.
ಇದರಿಂದ ಭಾಷಣ ಮುಂದುವರೆಸಲಾಗದೆ ಮುಜುಗರಕ್ಕೆ ಒಳಗಾದ ಪ್ರಧಾನಿ ಅದನ್ನು ತೋರಿಸಿಕೊಳ್ಳದೆ ನನ್ನ ಮಾತು ಎಲ್ಲರಿಗೂ ಕೇಳುತ್ತಿದೆಯೇ ಎಂದು ಹೇಳಿ ಪರಿಸ್ಥಿತಿ ಸರಿದೂಗಿಸಲು ಯತ್ನಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕ್ಲಾಸ್ ಸ್ಕ್ವಾಬ್ ಅವರು ಮುಂದಿನ ಕಲಾಪ ಕೈಗೆತ್ತಿಕೊಳ್ಳುವುದಾಗಿ ಹೇಳಿ ವಾತವರಣವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
ಪ್ರಧಾನಿ ಅವರ ಭಾಷಣವನ್ನು ಇಂಗ್ಲಿಷ್‍ಗೆ ತುರ್ಜುಮೆ ಮಾಡಬೇಕೆ, ಎಲ್ಲರಿಗೂ ಅವರು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ಸ್ಪಷ್ಟನೆ ಪಡೆದುಕೊಳ್ಳಲು ಬಯಸಿದ್ದಾರೆ.
ಈ ನಡುವೆ ಮೋದಿ ಅವರು ಆ ಕಡೆ, ಈ ಕಡೆ ನೋಡುತ್ತಿರುವುದು, ತಮ್ಮ ಭಾಷಣದ ಲಿಖಿತ ರೂಪಕ್ಕಾಗಿ ಹುಡುಕಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ನಿನ್ನೆ ಟ್ವಿಟರ್‍ನಲ್ಲಿ ಮೋದಿ ಅವರ ಟೆಲಿಪ್ರಾಂಟರ್ ದುರ್ಗತಿ ನಂಬರ್ ಒನ್ ಟ್ರೆಂಡ್‍ನಲ್ಲಿತ್ತು. ಈ ಬಗ್ಗೆ ಕಾಂಗ್ರೆಸ್‍ನ ಹಲವು ನಾಯಕರು ತಮ್ಮ ಲೇವಡಿ ವ್ಯಕ್ತ ಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು, ಮೋದಿ ಅವರ ಹೆಸರು ಉಲ್ಲೇಖಿಸದೆ ಅಷ್ಟೊಂದು ಸುಳ್ಳನ್ನು ಟೆಲಿಪ್ರಾಂಟರ್ ಕೂಡ ಸಹಿಸಲಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಲ್ಲದೆ, ಮೋದಿ ಅವರಿಗೆ ಟೆಲಿಪ್ರಾಂಟರ್‍ನಲ್ಲಿ ಲಿಖಿತ ಪ್ರತಿ ಕಾಣಿಸದ ಹೊರತಾಗಿ ಸ್ವಂತವಾಗಿ ಭಾಷಣ ಮಾಡಲು ಬರುವುದಿಲ್ಲ ಎಂದು ಹೇಳಿದ್ದ ತಮ್ಮದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‍ನ ಹಲವು ನಾಯಕರು ಟೆಲಿಪ್ರಾಂಟರ್ ಪ್ರಸಂಗವನ್ನು ಮುಂದಿಟ್ಟುಕೊಂಡು ಮೋದಿ ಕಾಲೆಳೆದಿದ್ದಾರೆ.
