ರಾಹುಲ್ ಬೆನ್ನಿಗೆ ನಿಂತು ಗಮನ ಸೆಳೆಯುತ್ತಿರುವ ಗಡ್ಡಧಾರಿ

Social Share

ಬೆಂಗಳೂರು,ಅ.11- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಹಲವರ ಪರಿಶ್ರಮ ಎದ್ದು ಕಾಣುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನಸೆಳೆಯುವುದು ಗಡ್ಡಧಾರಿ ವ್ಯಕ್ತಿ. ಪ್ರತಿ ಫ್ರೇಮ್ನಲ್ಲೂ ರಾಹುಲ್ ಗಾಂಧಿ ಅವರ ಹಿಂದೆಯೇ ಕಾಣಿಸಿಕೊಳ್ಳುವ ಈ ಗಡ್ಡಧಾರಿ ಹೆಸರು ಅಲಂಕಾರ್. ರಾಹುಲ್ ಗಾಂಧಿ ಅವರ ಕಾರು ಚಾಲನೆಯಿಂದ ಹಿಡಿದು ಅವರ ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಅಲಂಕಾರ್ ಮಹತ್ವದ ಪಾತ್ರ ವಹಿಸಿದ್ದಾರೆ.

ಯಾತ್ರೆಯುದ್ದಕ್ಕೂ ಕಾಲಕಾಲಕ್ಕೆ ನೀರು, ಹಣ್ಣಿನ ರಸ ಸೇರಿದಂತೆ ಅಗತ್ಯಗಳನ್ನು ಪೂರೈಸುವುದು ಕಂಡುಬರುತ್ತಿದೆ. ಯಾವ ಕ್ಷಣದಲ್ಲೂ ಅಲಂಕಾರ್ ಯಾತ್ರೆಯಿಂದ ಪಕ್ಕಕ್ಕೆ ಸರಿದು ಕಾರಿನಲ್ಲಿ ಪ್ರಯಾಣಿಸುವುದಿಲ್ಲ. ರಾಹುಲ್ ಗಾಂಧಿಯವರು ಹೆಜ್ಜೆ ಹಾಕಿದಷ್ಟು ಉದ್ದಕ್ಕೂ ಹೆಜ್ಜೆ ಹಾಕುತ್ತಾರೆ. ಪ್ರತಿ ಹಂತದಲ್ಲಿ ಅವರ ನೆರಳಿನಂತೆ ಹಿಂಬಾಲಿಸುತ್ತಾರೆ. ಬೆನ್ನ ಹಿಂದೆ ನಿಂತು ಬೇಕುಬೇಡಗಳನ್ನು ನಿಭಾಯಿಸುತ್ತಾರೆ.

ಭದ್ರತಾ ಸಿಬ್ಬಂದಿಗಳಿಗಿಂತಲೂ ಯಾತ್ರೆಯಲ್ಲಿ ರಾಹುಲ್ ಅವರ ನಿಗಾವಣೆಯಲ್ಲಿ ಅಲಂಕಾರ್ ಪಾತ್ರ ಪ್ರಮುಖವಾಗಿದೆ. ಒಂದು ಬ್ಯಾಗ್ ಹೆಗಲಿಗೇರಿಸಿಕೊಂಡು ವೈರ್ಲೆಸ್ ಸೆಟ್ನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಕೈಯಲ್ಲಿ ನೀರಿನ ಬಾಟಲ್ ಸೇರಿದಂತೆ ಯಾವುದಾದರೊಂದು ವಸ್ತುವನ್ನು ಹಿಡಿದುಕೊಂಡೇ ಅಲಂಕಾರ್ ಹೆಜ್ಜೆ ಹಾಕುತ್ತಾರೆ.

ನೂರಾರು ಬಾರಿ ಈ ವ್ಯಕ್ತಿ ಯಾರು ಎಂಬ ಪ್ರಶ್ನೆ ಹಲವರನ್ನು ಕಾಡಿದೆ. ಮಧ್ಯ ವಯಸ್ಸು ದಾಟಿದ ಅಲಂಕಾರ್ ಯುವಕರನ್ನು ನಾಚಿಸುವಂತೆ ಭಾರತ್ ಜೋಡೊದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.

ಇಷ್ಟೇ ಅಲ್ಲದೆ ಭದ್ರತಾ ಸಿಬ್ಬಂದಿಗಳ ಪಾತ್ರವಂತೂ ಯಾತ್ರೆಯಲ್ಲಿ ಗಮನಸೆಳೆಯುತ್ತಿದೆ. ರಾಜ್ಯ ಪೊಲೀಸರು ಜನರನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದರೆ ರಾಹುಲ್ ಗಾಂಧಿ ಅವರ ಸುತ್ತಮುತ್ತ ನಾಲ್ಕೈದು ಮಂದಿ ಸಿಆರ್ಪಿಎಫ್ ಯೋಧರು ಶಸ್ತ್ರಸಜ್ಜಿತರಾಗಿ ಕಾವಲು ಕಾಯುತ್ತಾರೆ.

ಈವರೆಗೂ ಎಲ್ಲಿಯೂ ರಾಹುಲ್ ಗಾಂಧಿಯವರ ಕಾಲಿಗಡ್ಡಲಾಗಿ ಯಾರೂ ಸಾಗದಂತೆ, ಎಡವದಂತೆ ಜಥನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲಲ್ಲಿ ಘಟಾನುಘಟಿ ನಾಯಕರು ರಾಹುಲ್ ಗಾಂಧಿಯವರ ಸಮೀಪ ಹೆಜ್ಜೆ ಹಾಕುವ ಉಮೇದಿನಲ್ಲಿ ಮುನ್ನುಗ್ಗಿ ಬರುತ್ತಿದ್ದಾರೆ. ಅವರನ್ನು ಅಷ್ಟೇ ಸಮಾಧಾನದಿಂದ ನಿಭಾಯಿಸುವುದು ಜನಸಾಮಾನ್ಯರನ್ನು ಭದ್ರತೆಗೆ ಧಕ್ಕೆಯಾಗದಂತೆ ರಾಹುಲ್ ಗಾಂಧಿಯವರತ್ತ ಬಿಡುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಯೋಧರ ಪಡೆ ನಿಭಾಯಿಸುತ್ತಿದೆ.

ಸಾಮಾನ್ಯವಾಗಿ ಗಾಂಧಿ ಕುಟುಂಬ ಹಲವು ಭಯೋತ್ಪಾದನಾ ಕೃತ್ಯಗಳಿಂದ ತೊಂದರೆಗೊಳಗಾಗಿದೆ. ಹೀಗಾಗಿ ರಾಹುಲ್ ಗಾಂಧಿ ಜನರ ನಡುವೆ ಪಾದಯಾತ್ರೆ ನಡೆಸುತ್ತಾರೆ ಎಂದಾಗ ಭದ್ರತೆ ಸವಾಲಿನ ವಿಷಯವಾಗಿದೆ.

ಕೇಂದ್ರ ಸರ್ಕಾರ ಎಸ್ಜಿಪಿ ಭದ್ರತೆಯನ್ನು ಹಿಂಪಡೆದ ಬಳಿಕವಂತೂ ಸುರಕ್ಷತೆಯ ಕುರಿತು ಹಲವು ಕಾಳಜಿಗಳು ವ್ಯಕ್ತವಾಗಿದ್ದವು. ಕೆಲವೊಮ್ಮೆ ರಾಹುಲ್ ಗಾಂಧಿ ಉತ್ಸಾಹದಿಂದ ಜನರ ನಡುವೆ ನುಗ್ಗಿ ಹೋಗಿ ಬೆರೆಯುವುದುಂಟು.
ಈ ವೇಳೆ ಭದ್ರತೆಗೆ ಸವಾಲಿನ ಪ್ರಶ್ನೆಯಾಗಿದೆ. ಇದೆಲ್ಲವನ್ನೂ ದಾಟು ಈವರೆಗೂ ಯಾವುದೇ ಲೋಪವಾಗದಂತೆ ಕಾಪಾಡಿಕೊಂಡು ಬರಲಾಗಿದೆ. ಅತ್ಯುತ್ಸಾಹದಲ್ಲಿರುವ ರಾಹುಲ್ ಗಾಂಧಿ ಕೆಲವೊಮ್ಮೆ ಸುರಿಯುವ ಮಳೆಯನ್ನು ಲೆಕ್ಕೆಸದೆ ಹೆಜ್ಜೆ ಹಾಕಿದ್ದಾರೆ.

ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆಗೆಲ್ಲ ಭದ್ರತಾ ಸಿಬ್ಬಂದಿ, ಆಪ್ತ ಸಹಾಯಕರು, ರಾಜ್ಯ ನಾಯಕರು ತಾವೂ ಮಳೆಯಲ್ಲಿ ನೆನೆದು ಯಾತ್ರೆಗೆ ಕೈಜೋಡಿಸಿದ್ದಾರೆ. ಅಂತೂ ಇಂತು ರಾಜ್ಯದಲ್ಲಿ 10 ದಿನಗಳ ಯಾತ್ರೆ ಯಶಸ್ವಿಯಾಗಿ ಮುಂದುವರೆದಿದೆ.

Articles You Might Like

Share This Article