ಚಾಮರಾಜನಗರ, ಸೆ.30- ಆಡಳಿತರೂಢ ಸರ್ಕಾರ ಶಾಸನಸಭೆಗಳು, ಮಾಧ್ಯಮಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಸರ್ಕಾರ ಮುಂದಾಗಿರುವುದರಿಂದ ನಮಗೆ ಪಾದಯಾತ್ರೆ ಅನಿವಾರ್ಯವಾಗಿದೆ. ಇದನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು.
ಜಿಲ್ಲೆಯ ಗುಂಡ್ಲಪೇಟೆಯ ಅಂಬೇಡ್ಕರ್ ಭವನದ ಮೈದಾನದಲ್ಲಿ ರಾಜ್ಯದಲ್ಲಿ ನಡೆಯುವ ಭಾರತ ಐಕ್ಯತಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಯಾಕೆ ಎಂಬ ಪ್ರಶ್ನೆಯನ್ನು ನಮಗೆ ಕೇಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು, ಸಂಸತ್, ವಿಧಾನಸಭೆ ಸೇರಿ ಶಾಸನ ಸಭೆಗಳಿವೆ.
ಆದರೆ ಅಲ್ಲಿ ಎಲ್ಲಿಯೂ ನಮ್ಮ ಮಾತುಗಳನ್ನು ಹೇಳಲಾಗುತ್ತಿಲ್ಲ. ಸಂಸತ್ ನಲ್ಲಿ ನಾವು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತಿದೆ. ವಿಧಾನಸಭೆಯಲ್ಲೂ ನಮ್ಮ ಧ್ವನಿಯನ್ನು ಅಡಗಿಸಲಾಗಿದೆ. ಮಾಧ್ಯಮಗಳನ್ನಂತೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲಾಗಿದೆ.
ಪ್ರತಿಭಟನೆ ಮಾಡಿದರೆ ಬಂಧನ ಮಾಡುತ್ತಾರೆ. ಹೀಗಾಗಿ ನಮಗೆ ಉಳಿದಿದ್ದು ಜನರ ಜೊತೆ ಹೆಜ್ಜೆ ಹಾಕುವ ಮಾರ್ಗವೊಂದೆ. ಇದನ್ನು ಯಾರು ತಡೆಯಲು ಸಾಧ್ಯವಿಲ್ಲ. ಕಾಶ್ಮೀರದವರೆಗೂ ಇದು ಯಾವ ಅಡ್ಡಿಯೂ ಇಲ್ಲದೆ ನಡೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುವ 21 ದಿನಗಳ ಈ ಯಾತ್ರೆಯಲ್ಲಿ ಎಲ್ಲರೂ ಹೆಜ್ಜೆ ಹಾಕುತ್ತಾರೆ. ಭ್ರಷ್ಟಚಾರ, ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆಗಳ ಬಗ್ಗೆ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.ಯಾವ ಶಕ್ತಿಯಿಂದಲೂ ಈ ಯತ್ರೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ದೇಶದಲ್ಲಿ ದ್ವೇಷ ಬಿತ್ತಲಾಗುತ್ತಿದೆ, ಸಮಾಜವನ್ನು ವಿಭಜಿಸಲಾಗುತ್ತಿದೆ, ಅದನ್ನು ತಡೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸಂವಿಧಾನ ರಕ್ಷಣೆ ಮಾಡುವ ಸಂಕಲ್ಪ ಮಾಡಿದ್ದೇವೆ. ಒಂದು ವೇಳೆ ಸಂವಿಧಾನ ಇಲ್ಲ ಎಂದಾದರೆ ತ್ರಿವರ್ಣಕ್ಕೂ ಅರ್ಥ ಇರುವುದಿಲ್ಲ ಎಂದರು.
ಬೆಳಗ್ಗೆಯಿಂದ ರಾತ್ರಿಯವರೆಗು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಕೆಲವೊಮ್ಮೆ ಬಿಸಿಲು, ಮಳೆ ಬರುತ್ತದೆ, ಆದರೂ ಐಕ್ಯತಾ ಯಾತ್ರೆ ಮುಂದುವರೆಯಲಿದೆ. ನಾನೊಬ್ಬನೆ ಈ ಪಾದಯಾತ್ರೆ ಮಾಡುತ್ತಿಲ್ಲ, ಲಕ್ಷಾಂತರ ಜನ ಹೆಜ್ಜೆ ಹಾಕುತ್ತಿದ್ದಾರೆ. ಇದು ದೇಶದ ಧ್ವನಿ ಎಂದರು.
ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣುವುದಿಲ್ಲ . ಕೆಲವೊಮ್ಮೆ ಪಾದಯಾತ್ರೆಯಲ್ಲಿ ಕೆಳಗೆ ಬಿದ್ದವರಿಗೆ ಇತರರು ಕೈ ನೀಡಿ ಮೇಲೆಳಲು ಸಹಾಯ ಮಾಡುತ್ತಾರೆ. ಆ ವೇಳೆ ನಿಮ್ಮ ಭಾಷೆ ಜಾತಿ ಯಾವುದು ಎಂದು ಕೇಳುವುದಿಲ್ಲ. ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತಿ ಮುನ್ನೆಡೆಸಿಕೊಂಡು ಬರಲಾಗುತ್ತಿದೆ. ಇದೇ ನಿಜವಾದ ನಮ್ಮ ಸುಂದರ, ಶಾಂತಿ ಹಾಗೂ ವೈಚಾರಿಕ ಭಾರತ ಎಂದರು.
ದಿನ ಆರೇಳು ಗಂಟೆ ಪಾದಯಾತ್ರೆ ನಡೆಯಲಿದೆ, ದಾರಿಯಲ್ಲಿ ಹಲವು ರೀತಿಯ ಜನ ನನ್ನನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಾರೆ. ಬೆಲೆ ಏರಿಕೆ, ರೈತರ ಮೇಲಿನ ದೌರ್ಜನ್ಯ, ನಿರುದ್ಯೋಗ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದನ್ನು ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.
ಯಾತ್ರೆಯಲ್ಲಿ ಎರಡು ಮೂರು ಗಂಟೆ ಭಾಷಣ ಮಾಡುವುದಿಲ್ಲ, ಎರಡು ಮೂರು ನಿಮಿಷದಲ್ಲಿ ನಾನು ಮಾತು ಮುಗಿಸುತ್ತೇನೆ, ಮುಂದಿನ ಅವಯಲ್ಲಿ ಪಾದಯಾತ್ರೆ ನಡೆಯಲಿದೆ. ನಾನು ಭಾಷಣ ಮಾಡುವುದಿಲ್ಲ, ನಿಮ್ಮ ಮಾತು ಕೇಳಲಿಕ್ಕೆ ಬಂದಿದ್ದೇನೆ ಎಂದರು.