ರಾಹುಲ್ ಗಾಂಧಿ ಟ್ವಿಟರ್ ಖಾತೆ ಮೇಲೆ ಕೇಂದ್ರ ಸರ್ಕಾರದ ಕಣ್ಣು ಬಿತ್ತೇ..?

Social Share

ನವದೆಹಲಿ, ಜ.27- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯಲ್ಲಿ ಅನುಪಾಲಕರ (ಫಾಲೋವರ್ರ್ಸ್) ಸಂಖ್ಯೆಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ಮತ್ತೊಮ್ಮೆ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಜಪಾಪಟಿಗೆ ಕಾರಣವಾಗಿದೆ.  ಸಾಮಾಜಿಕ ಜಾಲತಾಣದ ಮುಂಚೂಣಿ ಸಂಸ್ಥೆ ಟ್ವಿಟರ್ ಕೇಂದ್ರ ಸರ್ಕಾರದ ಅಣತಿಯಂತೆ ವಿರೋಧ ಪಕ್ಷದ ನಾಯಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಲಾರಂಭಿಸಿದ್ದಾರೆ.
ರಾಹುಲ್‍ಗಾಂಧಿ ಅವರು ಪ್ರಸ್ತುತ 19.6 ದಶಲಕ್ಷ ಅನುಪಾಲಕರನ್ನು ಹೊಂದಿದ್ದಾರೆ. ಈ ಮೊದಲು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಸಿದಾಗ ರಾಹುಲ್‍ಗಾಂಧಿ ರೈತರಿಗೆ ಬೆಂಬಲ ವ್ಯಕ್ತ ಪಡಿಸಿದ್ದರು. ಆಗ ಫಾಲೋವರ್ರ್ಸ್ ಸಂಖ್ಯೆ ಹೆಚ್ಚಾಗಲಾರಂಭಿಸಿತ್ತು.
ನವದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾದಾಗ ಆಕೆಯ ಗುರುತು ಪತ್ತೆಯಾಗುವಂತೆ ರಾಹುಲ್‍ಗಾಂಧಿ ಟ್ವಿಟರ್‍ನಲ್ಲಿ ಫೋಟೋ ಪ್ರಕಟಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದೇ ಕಾರಣಕ್ಕೆ ಕಳೆದ ಆಗಸ್ಟ್ 6ರಿಂದ 14ರ ನಡುವೆ ಖಾತೆಯನ್ನು ನಿರ್ಬಂಧಿಸಲಾಗಿತ್ತು.
ಕಳೆದ ಏಳೆಂಟು ತಿಂಗಳಿನಿಂದೀಚೆಗೆ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯಲ್ಲಿ ಅನುಪಾಲಕರ ಸಂಖ್ಯೆ ತೀವ್ರ ಹೆಚ್ಚಳವಾಗಿತ್ತು. ಪ್ರತಿ ತಿಂಗಳು ಕನಿಷ್ಠವೆಂದರೂ ಎರಡರಿಂದ ಮೂರು ಲಕ್ಷದಷ್ಟು ಸದಸ್ಯರ ಸಂಖ್ಯೆ ಹೆಚ್ಚಾಗಲಾರಂಭಿಸಿತ್ತು. ಒಂದು ಹಂತದಲ್ಲಿ ರಾಹುಲ್ ಗಾಂಧಿ ಅವರ ಖಾತೆಯಲ್ಲಿ ಅನುಪಾಲಕರ ಸಂಖ್ಯೆ ಗೋಚವಾಗದಂತೆ ಮರೆ ಮಾಚಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.
ಈ ಕುರಿತು ಕಳೆದ ಡಿಸೆಂಬರ್ 27ರಂದು ಟ್ವಿಟರ್‍ನ ಸಿಇಒ ಪರಾಗ್ ಅಗರ್‍ವಾಲ್ ಅವರಿಗೆ ಪತ್ರ ಬರೆದಿರುವ ರಾಹುಲ್‍ಗಾಂಧಿ, ಟ್ವಿಟರ್ ಸಂಸ್ಥೆ ತನ್ನ ಅರಿವಿಗಿಲ್ಲದಂತೆ ಮುಕ್ತ ಹಾಗೂ ನಿಷ್ಪಕ್ಷಪಾತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆಕ್ಷೇಪಿಸಿದ್ದಾರೆ. 2021ರ ಆಗಸ್ಟ್‍ನಿಂದ ತಮ್ಮ ಅನುಪಾಲಕರ ಸಂಖ್ಯೆಯನ್ನು ಹೆಪ್ಪುಗಟ್ಟಿಸಲಾಗುತ್ತಿದೆ. ಇತ್ತೀಚೆಗೆ 6.5 ಲಕ್ಷದಷ್ಟು ಹೆಚ್ಚಾಗಿತ್ತು. ಬಳಿಕ ಅನುಪಾಲಕರ ಸಂಖ್ಯೆಯನ್ನು ತಟಸ್ಥವಾಗಿರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ಟ್ವಿಟರ್‍ನ ವಕ್ತಾರರು ಆರೋಪವನ್ನು ಅಲ್ಲಗಳೆದಿದ್ದಾರೆ. ತಮ್ಮ ಸಂಸ್ಥೆ ಅನುಪಾಲಕರ ಸಂಖ್ಯೆ ಅಂದಾಜಿಸುವಾಗ ಕರಾರುವಕ್ಕಾದ ಲೆಕ್ಕವನ್ನು ಅನುಸರಿಸುತ್ತದೆ. ಸ್ಪಾಂ ಮತ್ತು ಮನಿಪುಲೇಷನ್ ವಿಷಯದಲ್ಲಿ ಶೂನ್ಯ ಸಹನೆ ಹೊಂದಿದೆ. ಸ್ಪಾಂ ಅನ್ನು ನಿವಾರಿಸಲು ಯಾಂತ್ರಿಕೃತ ಮತ್ತು ಶಿಸ್ತು ಬದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಅನುಪಾಲಕರ ಸಂಖ್ಯೆಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ವೇಳೆ ಬಹಿರಂಗ ರ್ಯಾಲಿಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣವನ್ನೇ ಅವಲಂಭಿಸಿದ್ದಾರೆ. ಈ ಹಂತದಲ್ಲಿ ಟ್ವಿಟರ್ ಖಾತೆಯ ಏರಿಳಿತಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

Articles You Might Like

Share This Article