ನನ್ನ ಮೇಲೆ ದಾಳಿ ಮಾಡಿದಷ್ಟು ಪ್ರಶ್ನೆ ಮಾಡುತ್ತೇನೆ, ಹೆದರುವ ಮಾತೇ ಇಲ್ಲ : ರಾಹುಲ್

Social Share

ನವದೆಹಲಿ, ಆ.5- ಶತಮಾನಗಳಿಂದ ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು, ಕಟ್ಟಿದ ಭಾರತ ನಮ್ಮ ಕಣ್ಣ ಮುಂದೆಯೇ ನಾಶವಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ, ನಾಲ್ಕು ಮಂದಿಯ ಸರ್ವಾಧಿಕಾರಿ ಆಡಳಿತದಿಂದ ನರಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದರು.

ಇಂದು ಬೆಳಗ್ಗೆ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಶುಕ್ರವಾರ ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಭಾರತ ಪ್ರಜಾಪ್ರಭುತ್ವದ ಸಾವಿಗೆ ಸಾಕ್ಷಿಯಾಗುತ್ತಿದೆ. ಶತಮಾನಗಳ ಹಿಂದೆ ಹಂತ ಹಂತವಾಗಿ ನಿರ್ಮಾಣಗೊಂಡು ಬಲಿಷ್ಠವಾಗಿದ್ದ ಭಾರತ ನಮ್ಮ ಕಣ್ಣ ಮುಂದೆಯೇ ನಾಶವಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಯಾರಾದರೂ ಅವರು ನೀತಿ, ಸಿದ್ಧಾಂತಗಳಿಗೆ ವಿರುದ್ಧವಾಗಿ ಮಾತನಾಡಿದರೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತದೆ. ಬಂಧಿಸಿ ಜೈಲಿಗೆ ಕಳುಹಿಸುವುದು, ಹಲ್ಲೆ ನಡೆಸುವುದು ಸೇರಿದಂತೆ ಹಲವು ರೀತಿಯಲ್ಲಿ ದಾಳಿ ಮಾಡಲಾಗುತ್ತಿದೆ ಎಂದು ಆವರು ಆರೋಪಿಸಿದರು.

ಆದರೆ ಕಾಂಗ್ರೆಸ್ ಪಕ್ಷವನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಜನ ಪರವಾದ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದರಿಂದ ನಾವು ಹಿಂದೆ ಸರಿಯುವುದಿಲ್ಲ. ಜಾರಿ ನಿರ್ದೇಶನಾಲಯ ಸೇರಿದಂತೆ ಯಾವುದೇ ರೀತಿಯ ಒತ್ತಡಗಳು ನಮ್ಮನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶದಲ್ಲಿ ಸ್ವತಂತ್ರವಾಗಿದ್ದ ತನಿಖಾ ಸಂಸ್ಥೆಗಳು ಈಗ ಆರ್‍ಎಸ್‍ಎಸ್ ಮತ್ತು ಬಿಜೆಪಿಯ ನಿಯಂತ್ರಣದಲ್ಲಿವೆ ಎಂದು ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ, ಆರ್‍ಎಸ್‍ಎಸ್ ಸಿದ್ಧಾಂತಗಳನ್ನು ಪ್ರತಿರೋಸುವುದು ನನ್ನ ಕೆಲಸ ಮತ್ತು ಅದನ್ನು ನಾನು ಮಾಡುತ್ತಲೇ ಇರುತ್ತೇನೆ. ನಾನು ಹೆಚ್ಚು ಪ್ರಶ್ನೆ ಮಾಡಿದಂತೆಲ್ಲಾ, ನನ್ನ ಮೇಲೆ ಹೆಚ್ಚು ದಾಳಿಗಳಾಗುತ್ತವೆ ಮತ್ತು ಕಠಿಣ ಆಕ್ರಮಣಗಳನ್ನು ನಾನು ಹೆದರಿಸಬೇಕಿದೆ. ನನ್ನ ಮೇಲೆ ದಾಳಿಯಾಗುವುದಕ್ಕೆ ನಾನು ಸಂತೋಷ ಪಡುತ್ತೇನೆ ಎಂದು ರಾಹುಲ್ ಹೇಳಿದರು.

ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಇಲ್ಲ. ನಮ್ಮನ್ನು ಮಾತನಾಡಲು ಅಡ್ಡಿ ಪಡಿಸಲಾಗುತ್ತಿದೆ. ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ಸಂಸತ್‍ನಿಂದ ನಮ್ಮನ್ನು ಅಮಾನತು ಪಡಿಸಲಾಗಿದೆ. ದೇಶ ಸಂಪೂರ್ಣವಾಗಿ ಸರ್ವಾಧಿಕಾರದ ಹಿಡಿತದಲ್ಲಿದೆ. ನಾವು ಹೆದರುವುದಿಲ್ಲ. ದೇಶದ ರಕ್ಷಣೆ, ಪ್ರಜಾಪ್ರಭುತ್ವ ಮತ್ತು ಭಾತೃತ್ವಕ್ಕಾಗಿ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.

ಬೆಲೆ ಏರಿಕೆ, ಅಗತ್ಯ ವಸ್ತುಗಳ ವಿರುದ್ಧ ಹೇರಲಾಗಿರುವ ಜಿಎಸ್‍ಟಿ, ನಿರುದ್ಯೋಗ ಹೆಚ್ಚಳದ ವಿರುದ್ಧ ಇಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಯನ್ನು ಮುಂದುವರೆಸಲಿದೆ. ಇವರು ಎಷ್ಟೇ ಪ್ರಯತ್ನ ಪಟ್ಟರು ನಾವು ಹೆದರುವುದಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ದೇಶದಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ.

ಒಬ್ಬರು ಮುಕ್ತವಾಗಿ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಮತ್ತೊಬ್ಬ ವ್ಯಕ್ತಿ ಇದ್ದಾರೆ, ಎಂಟು ವರ್ಷಗಳಿಂದ ಒಂದು ಪತ್ರಿಕಾಗೋಷ್ಠಿ ಮಾಡದೆ ಹೆದರುತ್ತಾರೆ, ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫಲಾಯನ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರೋಕ್ಷವಾಗಿ ಹೋಲಿಕೆ ಮಾಡಿದರು.

ಒಬ್ಬರು ಕಾಗದ ಪತ್ರಗಳ ನೆರವಿಲ್ಲದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತಾರೆ, ಮತ್ತೊಬ್ಬರು ಟೆಲಿಪ್ರಾಂಟರ್ ಇಲ್ಲದೆ ಮಾತನಾಡಲು ಪರದಾಡುತ್ತಾರೆ. ಜನರ ಪ್ರಶ್ನೆಗಳಿಗೆ ಹೆದರುತ್ತಾರೆ ಎಂದು ಒತ್ತಿ ಹೇಳಿದರು.

Articles You Might Like

Share This Article