ಗಡಿ ನಾಡು ಬಳ್ಳಾರಿಯಲ್ಲಿ ರಾಹುಲ್ ಅಬ್ಬರ

Social Share

ಬಳ್ಳಾರಿ,ಅ.15- ಕಳೆದ 38 ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಐಕ್ಯತಾ ಯಾತ್ರೆ ಅಂಗವಾಗಿ ಇಂದು ಮೊದಲ ಬಾರಿಗೆ ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಮೊದಲ ಬಾರಿಗೆ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದಾರೆ. ಛತ್ತೀಸ್‍ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಯಾತ್ರೆಗೆ ಸಾಥ್ ನೀಡಿದ್ದಾರೆ.

ಇಂದು ಬೆಳಗ್ಗೆ ಬಳ್ಳಾರಿಯ ಹಲಕುಂದಿ ಮಠದಿಂದ ಆರಂಭವಾದ ಪಾದಯಾತ್ರೆ ಕಮ್ಮ ಭವನದವರೆಗೂ 8.8 ಕಿ.ಮೀ ದೂರ ಕ್ರಮಿಸಿತ್ತು. ದಾರಿಯುದ್ದಕ್ಕೂ ರಸ್ತೆಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಎಂದು ರಂಗೋಲಿಗಳ ಮೂಲಕ ಚಿತ್ತಾರ ಬಿಡಿಸಿ ಸ್ವಾಗತ ಕೋರಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.

ಅಲ್ಲಲ್ಲಿ ಅನ್ನರಾಮಯ್ಯ ಕ್ಯಾಂಟೀನ್ ಸ್ಥಾಪನೆ ಮಾಡುವ ಮೂಲಕ ಯಾತ್ರಿಗಳಿಗೆ ಉಚಿತ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ನಾಯಕರಾದ ಖರ್ಗೆ ಮತ್ತು ಬಘೇಲ್ ಭಾಗವಹಿಸಿದ್ದರಿಂದ ಪಾದಯಾತ್ರೆ ವೇಗ ಎಂದಿಗಿಂತ ಕೊಂಚ ಕಡಿಮೆಯಾಗಿತ್ತು. ರಾಹುಲ್ ಗಾಂಧಿಯವರು ಹಿರಿಯ ನಾಯಕರ ಹೆಜ್ಜೆಗನುಗುಣವಾಗಿ ನಿಧಾನವಾಗಿ ನಡೆದುಬಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ , ಕೆ.ಸಿ.ವೇಣುಗೋಪಾಲ, ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.
ಹಳೆಯ ರಾಯಚೂರು ಬಸ್ ಸ್ಟಾಂಡ್‍ನಲ್ಲಿ 20 ನಿಮಿಷ ಕಾಲ ಟೀ ಬ್ರೇಕ್ ನೀಡಲಾಗಿತ್ತು. ಈವರೆಗೂ ಸುಮಾರು ಒಂದು ಕಿ.ಮೀ ದೂರ ಹೆಜ್ಜೆ ಹಾಕಿದ ಖರ್ಗೆ ಅವರು ಅಲ್ಲಿಂದ ನಿರ್ಗಮಿಸಿದರು. ಸಿದ್ದರಾಮಯ್ಯನವರು ಯಾತ್ರೆಗೆ ಆಗಮಿಸಿದರು.

ಮೊದಲ ಹಂತದ ಪಾದಯಾತ್ರೆಯ ಮೂಲಕ ಬಳ್ಳಾರಿ ಕಮ್ಮಭವನದಲ್ಲಿ ರಾಹುಲ್ ಗಾಂಧಿ ತಂಡ ವಿಶ್ರಾಂತಿ ಪಡೆದರು. ರಾಹುಲ್ ಗಾಂಧಿ ವಿಶ್ರಾಂತಿಗೆ ತೆರಳುವ ವೇಳೆ ನೂಕುನುಗ್ಗಲು ಉಂಟಾಯಿತು. ಅವರ ಹಿಂದೆಯೇ ಹೋಗಲು ಯತ್ನಿಸಿದ ಸಿದ್ದರಾಮಯ್ಯನವರಿಗೂ ಸ್ಥಳಾವಕಾಶ ಸಿಗದೆ ಪರದಾಡಿದರು. ಕೊನೆಗೆ ಭದ್ರತಾ ಸಿಬ್ಬಂದಿಗಳು ಕಾರ್ಯಕರ್ತರನ್ನು ಬದಿಗಿರಿಸಿ ಹಾದಿ ಸುಗಮ ಮಾಡಿಕೊಟ್ಟರು.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡ ಪಾದಯಾತ್ರೆ ಮಧ್ಯ ಕೇರಳದಲ್ಲಿ ಒಂದು ದಿನ, ಮೈಸೂರಿನಲ್ಲಿ ಎರಡು ದಿನ ಹೊರತುಪಡಿಸಿ ನಿರಂತರವಾಗಿ ಬಿಡುವಿಲ್ಲದೆ ನಡೆದಿದೆ.

ಈವರೆಗೂ 4 ರಾಜ್ಯಗಳ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದುಬಂದಿದೆ. ರಾಜ್ಯದಲ್ಲಿ ಸೆ.30ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಖರ್ಗೆ ಪ್ರವೇಶಿಸಿದ ಯಾತ್ರೆ 16 ದಿನಗಳ ಕಾಲ ಹೆಜ್ಜೆ ಹಾಕಿದೆ.

ಒಟ್ಟು 3,570 ಕಿ.ಮೀ ದೂರದ 150 ದಿನಗಳ ಈ ಯಾತ್ರೆ ಈವರೆಗೂ 1000 ಕಿ.ಮೀಗಿಂತಲೂ ಹೆಚ್ಚು ದೂರ ಕ್ರಮಿಸಿದೆ. ಅಲ್ಲಲ್ಲಿ ಅರಣ್ಯ ಪ್ರದೇಶಗಳು ಹಾಗೂ ಇತರ ತೊಡಕುಗಳಿಂದಾಗಿ ರಾಹುಲ್ ಗಾಂಧಿ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಒಟ್ಟು 700ಕ್ಕೂ ಹೆಚ್ಚು ಕಿ.ಮೀ ಹೆಜ್ಜೆ ಹಾಕಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆಗೆ ಪಾಲ್ಗೊಂಡಿದ್ದರು. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ಗಾಂv ವಾದ್ರ ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದೆಯಾಗಿದ್ದರೂ ಈವರೆಗೂ ಅವರು ಬಂದಿಲ್ಲ.

ಬಳ್ಳಾರಿಯ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಅದು ಕೂಡ ಈಡೇರುವ ಸಂಭವವಿಲ್ಲ. ಇನ್ನು ಐದು ದಿನಗಳ ಕಾಲ ರಾಹುಲ್ ಗಾಂಧಿ ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಬಳಿಕ ತೆಲಂಗಾಣ ರಾಜ್ಯದಿಂದ ಮುಂದುವರೆಯಲಿದ್ದಾರೆ.

ಇಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆದಿದ್ದು, ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಭೂಪೇಂದ್ರ ವಘೇಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಭಾಗವಹಿಸಿದ್ದಾರೆ.

Articles You Might Like

Share This Article