ನಾಳೆ ಮಹಾರಾಷ್ಟ್ರದಲ್ಲಿ ನಮೋ-ರಾಗಾ ಅಬ್ಬರದ ಪ್ರಚಾರ

ನವದೆಹಲಿ,ಏ.25- ಮಹಾರಾಷ್ಟ್ರದಲ್ಲಿ 4ನೇ ಮತ್ತು ಅಂತಿಮ ಹಂತದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇನ್ನು ಮೂರು ದಿನಗಳು ಬಾಕಿಯಿದೆ. ಪ್ರಧಾನಿ ನರೇಂದ್ರಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ಮಹಾರಾಷ್ಟ್ರದ ವಿವಿಧ ಕಡೆ ಅಬ್ಬರದ ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ಪ್ರಧಾನಿ ಮೋದಿ ಅವರು ಮುಂಬೈನ ಬಾಂದ್ರ-ಕುರ್ಲಾ ಕಾಂಪ್ಲೆಕ್ಸ್‍ನಲ್ಲಿ ನಾಳೆ ನಡೆಯಲಿರುವ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ನಂತರ ನಾಸಿಕ್ ಜಿಲ್ಲೆಯಲ್ಲಿ ಸಿನ್ನರ್ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಂದೇಡ್, ನಾಗಪುರ್, ವರ್ದ, ಚಂದಾಪುರ್ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ನಡೆಯಲಿರುವ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪುಣೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ಏ.29 ರಂದು 17 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮ ಹಂತದ ಮತದಾನ ನಡೆಯಲಿದ್ದು, ಕೇಂದ್ರ ಸಚಿವ ಸುಭಾಷ್ ಬಾಂಮ್ರೆ, ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವೋರಾ ಮತ್ತು ನಟಿ ಊರ್ಮಿಲಾ ಮಾತೋಂಡ್ಕರ್ ಸೇರಿದಂತೆ ಒಟ್ಟು 323 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರ ಮಹಾರಾಷ್ಟ್ರ, ಮುಂಬೈ, ಥಾಣೆ, ಪಾಲ್ಘರ್ ಮತ್ತು ಪಶ್ಚಿಮ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ 3.11 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಮುಂಬಯಿಯ ಉತ್ತರ, ಮುಂಬೈ ನಾರ್ತ್-ವೆಸ್ಟ್, ಮುಂಬೈ ನಾರ್ತ್-ಸೆಂಟ್ರಲ್, ಮುಂಬೈ ನಾರ್ತ್-ವೆಸ್ಟ್, ಮುಂಬೈ ನಾರ್ತ್-ವೆಸ್ಟ್, ಮುಂಬೈ ನಾರ್ತ್-ವೆಸ್ಟ್, ಮುಂಬೈ ನಾರ್ತ್-ವೆಸ್ಟ್, ಮುಂಬೈ ಉತ್ತರ- ಪೂರ್ವ, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ-ಮಧ್ಯ, ಮಾವಲ್ ಮತ್ತು ಶಿರೂರ್ (ಪುಣೆ ಜಿಲ್ಲೆಯ) ಮತ್ತು ಶಿರಡಿ (ಅಹ್ಮದ್ನಗರ ಜಿಲ್ಲೆ)ಯಲ್ಲಿ ಏ.29ರಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಚುನಾವಣೆಗಾಗಿ ಆಯೋಗ ಅಂತಿಮ ಹಂತದ ಸಿದ್ದತೆಗಳಲ್ಲಿ ತೊಡಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಿದೆ.