ತೈಲ ಬೆಲೆ ವಿಷಯ ಇಳಿಕೆ ವಿಚಾರ : ಮೋದಿ ವಿರುದ್ಧ ಸಿಡಿದೆದ್ದ ರಾಹುಲ್‍ಗಾಂಧಿ

Spread the love

ನವದೆಹಲಿ, ಏ.28- ತೈಲ ಬೆಲೆ ವಿಷಯದಲ್ಲಿ ಪ್ರಧಾನಿ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಮೋದಿ ಅವರ ಒಕ್ಕೂಟ ವ್ಯವಸ್ಥೆ ಸಹಕಾರ ತತ್ವದ ಆಧಾರದಲ್ಲಿಲ್ಲ. ಬದಲಾಗಿ ಬಲವಂತದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.ಹೆಚ್ಚುತ್ತಿರುವ ತೈಲಬೆಲೆಯಿಂದ ಜನ ರೋಚ್ಚಿಗೆದ್ದಿದ್ದು ಆ ಸಿಟ್ಟನ್ನು ಪ್ರತಿಪಕ್ಷಗಳ ತಿರುಗಿಸಲು ನಿನ್ನೆ ಪ್ರಧಾನಿ ಹೇಳಿಕೆ ನೀಡಿದ್ದರು.

ಕಳೆದ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿತ್ತು. ಅದನ್ನು ಅನುಸರಿಸಿ ರಾಜ್ಯ ಸರ್ಕಾರಗಳು ಸ್ಥಳೀಯವಾದ ವ್ಯಾಟ್ ತೆರಿಗೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿತ್ತು.ಆದರೆ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಮಾಡಿಲ್ಲ. ಅದರಲ್ಲೂ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಈಗಲಾದರೂ ವ್ಯಾಟ್ ಕಡಿಮೆ ಮಾಡಿ ಜನರಿಗೆ ನೆರವಾಗಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸಹಕಾರ ಅಗತ್ಯ ಎಂದು ಮೋದಿ ಹೇಳಿದ್ದರು. ಮೋದಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಪ್ರತಿಪಕ್ಷಗಳು ನಿನ್ನೆ ಒಟ್ಟಾಗಿ ಹೇಳಿಕೆ ನೀಡಿ, ಬಿಜೆಪಿ ಆಡಳಿತ ಇರುವ ಬಹುತೇಕ ರಾಜ್ಯಗಳಲ್ಲಿ ಈಗಲೂ ತೆರಿಗೆ ಕಡಿಮೆ ಮಾಡಿಲ್ಲ. ಕೇಂದ್ರ ಸರ್ಕಾರವೂ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯಿಂದ ಲಕ್ಷಾಂತರ ಕೋಟಿ ರೂಪಾಯಿ ಸುಂಕ ಸಂಗ್ರಹಿಸಿವೆ ಎಂದು ಹೇಳಿದ್ದವು. ಇಂದು ರಾಹುಲ್ ಗಾಂಧಿ ಹೇಳಿಕೆ ನೀಡುವ ಮೂಲಕ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳ ಬೆಂಬಲಕ್ಕೆ ನಿಂತಿದ್ದಾರೆ.

ತೈಲ ಬೆಲೆ ದುಬಾರಿಯಾದಾಗ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡಲಾಗುತ್ತದೆ. ಕಲ್ಲಿದ್ದಲ ಕೊರತೆಯಾದಾಗ ರಾಜ್ಯಗಳನ್ನು ಹೊಣೆ ಮಾಡಲಾಗುತ್ತದೆ, ಆಮ್ಲಜನಕ ಕೊರತೆಯಾದಾಗಲೂ ರಾಜ್ಯಗಳನ್ನು ಹೊಣೆ ಮಾಡಲಾಗುತ್ತದೆ. ತೈಲಗಳ ಮೇಲಿನ ತೆರಿಗೆಯಲ್ಲಿ ಶೇ.68ರಷ್ಟನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ.

ಆದರೂ ಈವರೆಗೂ ಪ್ರಧಾನಿ ತೈಲ ಬೆಲೆ ಏರಿಕೆ, ಕಲ್ಲಿದ್ದಲು ಮತ್ತು ಆಮ್ಲಜನಕ ಕೊರತೆ ಹೊಣೆಗಾರಿಕೆಯನ್ನು ಹೊರಲು ಸಿದ್ಧರಿಲ್ಲ. ಮೋದಿ ಅವರ ಒಕ್ಕೂಟ ವ್ಯವಸ್ಥೆ ಅಂದರೆ ಅದು ಸಹಕಾರ ತತ್ವ ಅಲ್ಲ, ಬಲವಂತದ ಕ್ರಮವಾಗಿದೆ ಎಂದಿದ್ದಾರೆ.