ಬೆಂಗಳೂರು, ಅ.11- ಬಿಜೆಪಿ ದಲಿತರ ಹಾಗೂ ಪರಿಶಿಷ್ಟ ವರ್ಗಗಳ ವಿರೋಧಿ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯವರೇ ಬಿಜೆಪಿ ದಲಿತರ ವಿರೋಧಿ ಎಂದು ಯಾವ ಬಾಯಲ್ಲಿ ಹೇಳಿದರೋ ಅಥವಾ ಯಾರಾದರೂ ಹೇಳುವಂತೆ ನಿಮಗೆ ಬಲವಂತ ಮಾಡಿದರೋ ಗೊತ್ತಿಲ್ಲ. ಆದರೆ ನಿಮ್ಮ ಹೇಳಿಕೆಗೆ ನನ್ನ ಕನಿಕರವಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವದ ಶ್ರೇಷ್ಠ ದಾರ್ಶನಿಕ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವೇ ಕಾಂಗ್ರೆಸ್ ಪಕ್ಷ ಅಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛೇಸುತ್ತೇನೆ ಎಂದಿದ್ದಾರೆ.
ಇಷ್ಟು ಮಾತ್ರವಲ್ಲದೇ, ವಾಲ್ಮೀಕಿ ಪ್ರಶಸ್ತಿ ಘೋಷಣೆ ಪ್ರಥಮ ಬಾರಿಗೆ ರಾಜ್ಯದ ಎಲ್ಲೆಡೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ, ಪ್ರತ್ಯೇಕ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಡಿದ್ದು ಯಾವ ಸರ್ಕಾರ? ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ, ನಿಮ್ಮ ಜೊತೆಗೆ ಜೋಡೋ ಯಾತ್ರೆ ನಾಟಕ ಮಾಡುತ್ತಿರುವ ಹಕ್ಕ-ಬುಕ್ಕರಿಂದ ತಿಳಿಯಬಹುದಿತ್ತು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರಿಗೂ ಟಕ್ಕರ್ ಕೊಟ್ಟಿದ್ದಾರೆ.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ, ಕೇಂದ್ರ ಹಾಗು ರಾಜ್ಯ ಎರಡೂ ಕಡೆ ಪ್ರತ್ಯೇಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವಾಲಯ ರಚಿಸಿದ್ದು, ಇದೇ ಬಿಜೆಪಿ ಸರ್ಕಾರ. 5 ವರ್ಷ ಆಡಳಿತ ನಡೆಸಿದ್ದ ಸ್ವಯಂ ಘೋಷಿತ ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಅಲೋಚನೆ ಏಕೆ ಬರಲಿಲ್ಲ.? ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮುದಾಯದ 36 ವರ್ಷಗಳ ಬೇಡಿಕೆಯಾಗಿದ್ದ ಪರಿವಾರ ಮತ್ತು ತಳವಾರ ಸಮಸ್ಯೆ ಇತ್ಯರ್ಥಪಡಿಸಿದ್ದು ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ.
ಹತ್ತು ವರ್ಷ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಸಮುದಾಯಕ್ಕೆ ನೀವು ನ್ಯಾಯ ಕೊಡಿಸಬಹುದಿತ್ತಲ್ಲವೇ? ಎಂದು ಶ್ರೀರಾಮುಲು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ನಾಯಕ ಸಮುದಾಯಕ್ಕೆ ಮಹಾಪೌರರ ಸ್ಥಾನ ಅತ್ಯಂತ ಹಿಂದುಳಿದ ಸಿದ್ಧಿ ಸಮುದಾಯದ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ಬಿಜೆಪಿಯೇ ಹೊರೆತು ಕಾಂಗ್ರೆಸ್ ಪಕ್ಷವಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.
ಸುಮಾರು 40 ವರ್ಷಗಳ ಬೇಡಿಕೆಯಾಗಿದ್ದ ಪರಿಶಿಷ್ಟ ಜಾತಿ17% ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ 7% ಹೆಚ್ಚಳ. ಈಗ ಹೇಳಿ ರಾಹುಲ್ ಗಾಂಧಿಯವರೇ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ನಿಜವಾದ ವಿರೋಧಿ ಯಾರೆಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರ ಎಸ್ಸಿ-ಎಸ್ಟಿ ಪರವಾಗಿ ಇದಿಯೋ ಇಲ್ಲವೋ? ಏನು ಮಾಡದೆ ಈ ಎರಡೂ ಸಮುದಾಯದ ಮೂಗಿಗೆ ತುಪ್ಪ ಸವರಿದ್ದೇ ಕಾಂಗ್ರೆಸ್ ಎಂದು ರಾಹುಲ್ ಗಾಂಧಿಯವರ ಆರೋಪಕ್ಕೆ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
ಕಳೆದ 2018 ಹಾಗೂ 2019 ರ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಎಸ್ಸಿ-ಎಸ್ಟಿ ಹಿಂದುಳಿದ ಸಮುದಾಯದವರು ಕಾಂಗ್ರೆಸ್ ಪಕ್ಷದಿಂದ ಏಕೆ ದೂರವಾದರು ಎಂಬುದನ್ನು ಆತ್ಮವಲೋಕನ ಮಾಡಿಕೊಂಡಿದ್ದಾರೆ ಬಿಜೆಪಿ ಬಗ್ಗೆ ಮಾತನಾಡುವ ಪ್ರಮಯವೇ ಬರುತ್ತಿರಲಿಲ್ಲ ಎಂದು ಕುಹಕ ವಾಡಿದ್ದಾರೆ.
ಕಡೆ ಪಕ್ಷ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್,ಮಲಿಕಾರ್ಜು ನ ಖರ್ಗೆ, ಶ್ರೀನಿವಾಸ್ ಪ್ರಸಾದ್, ಹಿಂದುಳಿದ ವಿಶ್ವನಾಥ್ ಅವರ ಬೆನ್ನಿಗೆ ಚೂರಿ ಹಾಕಿದ್ದು ಯಾರು ಎಂದು ನಿಮ್ಮ ಪಕ್ಕದಲ್ಲಿರುವವರನ್ನೇ ಕೇಳಿದರೆ ಚನ್ನಾಗಿರುತ್ತಿತ್ತು. ಇತಿಹಾಸ ತಿಳಿಯವದರಿಗೆ ಭವಿಷ್ಯವಿಲ್ಲ ಎಂಬ ಮಾತು ನಿಮಗೆ ಅನ್ವಯವಾಗದಿರಲಿ ಎಂದು ವ್ಯಂಗ್ಯಭರಿತವಾಗಿ ಹೇಳಿದ್ದಾರೆ.