ನವದೆಹಲಿ, ಆ.4- ಏನು ಬೇಕಾದರೂ ಮಾಡಿಕೊಳ್ಳಿ, ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ದೇಶ ರಕ್ಷಣೆಯ ಕೆಲಸವನ್ನು ನಾವು ಮುಂದುವರೆಸುತ್ತೇವೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ನಿನ್ನೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹೆರಾಲ್ಡ್ ಹೌಸ್ ಮತ್ತು ಯಂಗ್ ಇಂಡಿಯಾ ಕಚೇರಿಯನ್ನು ಜಪ್ತಿ ಮಾಡಿತ್ತು. ಎಐಸಿಸಿ ಕಚೇರಿಯ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ದಿಗ್ಭಂದನ ವಿಧಿಸಲಾಗಿತ್ತು.
ಅದರ ಬಳಿಕ ತುಸು ಸಿಟ್ಟಾದಂತೆ ಕಂಡು ಬಂದ ರಾಹುಲ್ ಗಾಂಧಿ, ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಖಾರವಾಗಿ ಪ್ರತಿಕ್ರಿಯಿಸಿದರು. ನಾವು ನರೇಂದ್ರ ಮೋದಿಗೆ ಹೆದರುವುದಿಲ್ಲ, ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಹೇಳುವುದು ಅರ್ಥವಾಯಿತೆ. ಏನು ಬೇಕಾದರೂ ಮಾಡಿಕೊಳ್ಳಿ, ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಪಾಠಿಸವಾಲು ಹಾಕಿದ್ದಾರೆ.
ದೇಶ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವುದು ನನ್ನ ಕರ್ತವ್ಯ. ಅದನ್ನು ಖಂಡಿತವಾಗಿ ಮಾಡುತ್ತೇನೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ. ಪಕ್ಷದ ಕಚೇರಿ ಮತ್ತು ನಿವಾಸದ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಓಡಾಡಲು ಅಡ್ಡಿ ಪಡಿಸಿದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ಗಾಂ, ಸತ್ಯಕ್ಕೆ ಬ್ಯಾರಿಕೇಡ್ ಹಾಕಲು ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರು ಹೋರಾಟವನ್ನು ಮುಂದುವರೆಸಲಿದ್ದಾರೆ ಎಂದಿದ್ದಾರೆ.
ಒಂದಿಷ್ಟು ಒತ್ತಡ ಹಾಕಿದರೆ ನಮ್ಮನ್ನು ಸುಮ್ಮನಿರಿಸಬಹುದು ಎಂದು ಸರ್ಕಾರ ಭಾವಿಸಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಮತ್ತು ಈ ದೇಶಕ್ಕೆ ಏನೇಲ್ಲಾ ಮಾಡಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಅವರು ನಮ್ಮ ವಿರುದ್ಧ ಏನು ಮಾಡುತ್ತಾರೆ ಎಂಬುದು ದೊಡ್ಡ ವಿಷಯವೇ ಅಲ್ಲ. ದೇಶದ ವಿರುದ್ಧವಾಗಿ ಏನು ಮಾಡುತ್ತಾರೋ ನಾವು ಅದರ ವಿರುದ್ಧ ನಿಲ್ಲುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.