ನಗಾರಿ ಬಾರಿಸುತ್ತ ರಾಜ್ಯಕ್ಕೆ ರಾಹುಲ್ ಎಂಟ್ರಿ

Social Share

ಬೆಂಗಳೂರು,ಸೆ.30-ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಇಂದಿನಿಂದ ಆರಂಭಗೊಂಡಿದೆ. ನಿನ್ನೆ ಕೇರಳದಿಂದ ತಮಿಳುನಾಡಿಗೆ ವಾಹನದ ಮೂಲಕ ತೆರಳಿದ್ದ ರಾಹುಲ್ ಗಾಂಧಿ ಇಂದು ಮತ್ತೆ ಕೇರಳದ ಗೂಡಲೂರು ಮಾರ್ಗವಾಗಿಯೇ ಕರ್ನಾಟಕ ಪ್ರವೇಶಿಸಿದರು.

ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆ ಸಮೀಪದ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕರ್ನಾಟಕ ತಮಿಳುನಾಡು ಗಡಿಯ ಕೆಕ್ಕನಹಳ್ಳಿ ಚೆಕ್‍ಪೋಸ್ಟ್ ಬಳಿ ರಾಜ್ಯಕ್ಕೆ ಯಾತ್ರೆ ಪಾದರ್ಪಾಣೆ ಮಾಡಿತು. ಬಂಡೀಪುರ ಅರಣ್ಯದ 30 ಕಿ.ಮೀ ವ್ಯಾಪ್ತಿಯಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲದ ಕಾರಣ ಸುಮಾರು 40ರಿಂದ 50 ಕಿ.ಮೀ ದೂರದ ಗುಂಡ್ಲುಪೇಟೆಗೆ ರಾಹುಲ್ ಗಾಂಧಿ ವಾಹನದಲ್ಲಿ ಆಗಮಿಸಿದರು.

ಹಾದಿಮಧ್ಯೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ವಿಧಾನಪರಿಷತ್‍ನ ವಿರೋಧ ಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಸಿದ್ದರಾಮಯ್ಯ ಅವರ ತಂಡದೊಂದಿಗೆ ಖಾಸಗಿ ಹೋಟೆಲ್‍ನಲ್ಲಿ ಉಪಹಾರ ಸೇವಿಸಿ ಯಾತ್ರೆಯ ಉದ್ಘಾಟನಾ ಸಮಾವೇಶ ನಡೆಯುವ ಗುಂಡ್ಲುಪೇಟೆ ಅಂಬೇಡ್ಕರ್ ಭವನದ ಮೈದಾನಕ್ಕೆ ಆಗಮಿಸಿದರು.
ಅಲ್ಲಿಂದ ರಾಜ್ಯದಲ್ಲಿ 21 ದಿನಗಳ ಕಾಲ 511 ಕಿ.ಮೀ ಸಂಚರಿಸುವ ಯಾತ್ರೆಗೆ ಚಾಲನೆ ನೀಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕನ್ಯಾಕುಮಾರಿಯಿಂದ ನಿರಂತರವಾಗಿ ರಾಹುಲ್ ಗಾಂಯವರ ಜೊತೆ ಹೆಜ್ಜೆ ಹಾಕಿರುವ ಭಾರತ ಯಾತ್ರಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ಲೇಖಕರಾದ ದೇವನೂರು ಮಹದೇವ, ಸಿವಿಲ್ ಸೊಸೈಟಿಯ ಮುಖ್ಯಸ್ಥರಾದ ಯೋಗೇಂದ್ರ ಯಾದವ್ ಅವರು ವೇದಿಕೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಂವಿಧಾನದ ಪೀಠಿಕೆಯನ್ನು ನೀಡುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರು.

ಯಾತ್ರೆಯ ಉದ್ಘಾಟನೆ ವೇಳೆ ರಾಹುಲ್‍ಗಾಂಧಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೈಗಳನ್ನು ಹಿಡಿದು ಡಮರಗು ಬಡಿಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿಯವರಿಗೆ ಡಮರುಗ ಬಡಿಯಲು ಬೇರೆ ಕೋಲು ಕೊಡಲು ಮುಂದಾದರಾದರೂ ಅದನ್ನು ತಿರಸ್ಕರಿಸಿದ ರಾಹುಲ್ ಗಾಂಧಿ ಒಂದೇ ಕೋಲಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ಡಮರುಗ ಬಡಿದರು. ನಂತರ ಗಿಡಕ್ಕೆ ನೀರೆರೆಯುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು.

Articles You Might Like

Share This Article