ಮುರುಘಾ ಶ್ರೀಗಳಿಂದ ಲಿಂಗ ದೀಕ್ಷೆ ಪಡೆದ ರಾಹುಲ್‍ಗಾಂಧಿ

Social Share

ಚಿತ್ರದುರ್ಗ, ಆ.3- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಲಿಂಗದೀಕ್ಷೆ ನೀಡಿದ್ದಾರೆ. ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ ಮಠದ ಕರ್ತೃ ಶ್ರೀ ಮುರುಘಾ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು, ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಕೆಲ ಸಮಯ ಧ್ಯಾನ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಗಳು ರಾಹುಲ್ ಗಾಂಧಿಯವರಿಗೆ ದೀಕ್ಷೆ ನೀಡಿದರು. ದೀಕ್ಷೆ ಪಡೆದ ನಂತರ ನಮಗೆ ಲಿಂಗಪೂಜೆ ಇತ್ಯಾದಿಗಳ ಕುರಿತು ತಿಳಿಸಿಕೊಡಲು ದೆಹಲಿಗೆ ಯಾರನ್ನಾದರೂ ಕಳುಹಿಸಲು ಕೋರಿಕೆ ಇಟ್ಟರು ಎಂದು ಮೂಲಗಳು ತಿಳಿಸಿವೆ.

ಮುರುಘಾ ಶ್ರೀಗಳ ಆಶೀರ್ವಾದ ಪಡೆದ ನಂತರ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಠಾೀಧಿಶರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿರಕ್ತಮಠದ ಹಾನಗಲ್ ಸ್ವಾಮಿಜಿ, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಮಹತ್ವ ಅರಿತೆ ಲಿಂಗಧಾರಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಷ್ಟಲಿಂಗದ ಮಹತ್ವವನ್ನು ಅರಿತೆ ಲಿಂಗಧಾರಣೆ ಪಡೆದರು. ಈ ವೇಳೆ ಅವರಿಗೆ ಬಸವಣ್ಣನವರ ಭಾವಚಿತ್ರ್ನ ನೀಡಲಾಯಿತು ಎಂದು ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶರಣರು, ಇಂದು ರಾಹುಲ್‍ಅವರು ಮಠಕ್ಕೆ ಸೌಜನ್ಯದ ಭೇಟಿ ನೀಡಿದ್ದರು. ಸಂವಾದದಲ್ಲಿ ಕೆಲಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದಾದರು. ಬಸವ ತತ್ವ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡಿದೆವು ಎಂದರು.

ಸಾಮಾಜಿಕ ಸಮಾನತೆ, ನಾವೆಲ್ಲರೂ ಒಂದೇ ಎಂಬ ಬಸವಣ್ಣನವರ ತತ್ವ ವನ್ನು ತಿಳಿಸಿದೆವು. ಪ್ರಾರ್ಥನೆ ಮತ್ತು ಭಜನೆ ಹೇಗೆ ಮಾಡಬೇಕೆಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದರು. ಈ ವೇಳೆ ಇಷ್ಟಲಿಂಗ ಲಿಂಗ ಪೂಜೆಯನ್ನು ಮಾಡಿ ತೋರಿಸಲಾಯಿತು. ಕೂಡಲೇ ಇಷ್ಟಲಿಂಗ ಪಡೆಯಬಹುದೆ ಎಂದು ಮಠಾೀಶರೊಬ್ಬರು ಕೇಳಿದರು. ಇದನ್ನು ಕೇಳಿದ ರಾಹುಲ್ ಗಾಂಧಿ, ಕೂಡಲೇ ನನಗೆ ಆಸಕ್ತಿ ಇದೆ ಎಂದು ಹೇಳಿದರು. ತಕ್ಷಣ ಹಣೆಗೆ ವಿಭೂತಿ ಧರಿಸಿ ಲಿಂಗಧಾರಣೆ ಮಾಡಿದೆವು ಎಂದು ಮುರುಘಾ ಶರಣರು ವಿವರಿಸಿದರು.

ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳಿದ ರಾಹುಲ್ ಗಾಂಧಿಯವರಿಗೆ ಕಾರ್ಯಕರ್ತರು ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

Articles You Might Like

Share This Article