ಬೆಂಗಳೂರು,ಮಾ.7- ಕಲ್ಯಾಣ ಕರ್ನಾಟಕ ವ್ಯಾಪ್ತಿಯ ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ ವಿಸ್ತೃತ ಯೋಜನೆ ವರದಿ(ಡಿಪಿಆರ್) ತಯಾರಿಸಲು ಕೆಎಸ್‍ಐಡಿಸಿಗೆ 11 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ಸಚಿವ ವಿ.ಸೋಮಣ್ಣ ವಿಧಾನಸಭೆಗೆ ತಿಳಿಸಿದರು.
ಶಾಸಕ ಬಸಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2022-23ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಒಟ್ಟು 186 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಈ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ವತಿಯಿಂದ 40 ಕೋಟಿ, ಜಿಲ್ಲಾ ಖಜನಾ ಪ್ರತಿಷ್ಠಾನದ ವತಿಯಿಂದ 10 ಕೋಟಿ ಸೇರಿದಂತೆ ಒಟ್ಟಾರೆ 50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ರೈಟ್ ಸಂಸ್ಥೆಯವರು 186 ಕೋಟಿ ಅಂದಾಜಿನ ವಿಸ್ತೃತ ವರದಿಯನ್ನು ಸಲ್ಲಿಸಿದ್ದಾರೆ. ಡಿಪಿಆರ್ ಸಿದ್ದಪಡಿಸಲು ಕೆಎಸ್‍ಐಡಿಸಿಗೆ ಹಣ ನೀಡಿದ್ದೇವೆ. ಒಟ್ಟು 402 ಎಕರೆ ಜಮೀನು ಕೂಡ ಇದೆ ಎಂದು ವಿವರಿಸಿದರು.
ಈ ವೇಳೆ ಶಾಸಕ ಪ್ರಿಯಾಂಕ ಖರ್ಗೆ ಮಧ್ಯಪ್ರವೇಶಿಸಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ವತಿಯಿಂದ ಬೇರೆ ಬೇರೆ ಯೋಜನೆಗಳಿಗೆ ಅನುದಾನ ಬಳಸಿಕೊಳ್ಳುವ ಪರಿಪಾಠವನ್ನು ಬಿಜೆಪಿ ಹುಟ್ಟುಹಾಕಿದೆ. ಇದು ಸರಿಯಾದ ಕ್ರಮವಲ್ಲ. ಆ ಅನುದಾನವನ್ನು ಯಾವುದಕ್ಕೆ ಮೀಸಲಿಡಬೇಕೋ ಅದಕ್ಕೆ ಮೀಸಲಿಡಿ. ಸರ್ಕಾರದಿಂದ ಎಷ್ಟು ಹಣವನ್ನು ಮೀಸಲಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸೋಮಣ್ಣ, ಎಲ್ಲರ ಅಭಿವೃದ್ದಿಪಡದೇ 50 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ. ಇನ್ನೊಂದು ಬಾರಿ ಎಲ್ಲ ಶಾಸಕರ ಜೊತೆ ಸಭೆ ಕರೆದು ಸಿಎಂ ಜೊತೆ ಚರ್ಚಿಸುವುದಾಗಿ ಹೇಳಿದರು.
