ಹವಾಮಾನ ವೈಪರೀತ್ಯ ಮತ್ತು ತುಂತುರು ಮಳೆಗೆ ತತ್ತರಿಸಿದ ಕರ್ನಾಟಕ

ಬೆಂಗಳೂರು, ನ.18- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಇಂದು ಮುಂಜಾನೆಯಿಂದಲೇ ಮತ್ತೆ ಜಿಟಿ ಜಿಟಿ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಳಿಸಿತು. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಲಘು ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು , ನಾಳೆಯವರೆಗೂ ಆಗಾಗ್ಗೆ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ.

ಕಳೆದ ಎರಡು ವಾರಗಳಿಂದ ಸತತವಾಗಿ ಬೀಳುತ್ತಿರುವ ಹಿಂಗಾರು ಮಳೆ ಹೆಚ್ಚು ಕಡಿಮೆ ಈ ತಿಂಗಳ ಅಂತ್ಯದವರೆಗೂ ಮುಂದುವರೆಯುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ವಾಯುಭಾರ ಕುಸಿತ ಉಂಟಾಗುತ್ತಿರುವುದರಿಂದ ಹಿಂಗಾರು ಮಳೆ ಚೇತರಿಕೆ ಕಂಡಿದೆ.

ಹೀಗಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನ.1ರಿಂದ ಈ ತನಕ ವಾಡಿಕೆಗಿಂತ ಶೇ.164ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ 200ಕ್ಕೂ ಹೆಚ್ಚು ಅಕ ಪ್ರಮಾಣದ ಮಳೆಯಾಗಿದೆ.

ಮಳೆ ಕೊರತೆ ಉಂಟಾಗಿದ್ದ ಉತ್ತರ ಕರ್ನಾಟಕ ಭಾಗದಲ್ಲೂ ವಾಡಿಕೆಗಿಂತ ಶೇ.16ರಷ್ಟು ಮಳೆಯಾಗಿದೆ. ನವೆಂಬರ್‍ನಿಂದಲೂ ಚಳಿಗಾಲ ಪ್ರಾರಂಭವಾಗುವುದು ವಾಡಿಕೆ. ಈ ಬಾರಿ ಹಿಂಗಾರು ಆರಂಭದಿಂದಲೇ ಕ್ರಿಯಾಶೀಲವಾಗಿರುವುದರಿಂದ ನಿರಂತರ ಮಳೆಯಾಗುತ್ತಿದ್ದು ಹಲವು ವರ್ಷಗಳ ನಂತರ ಈ ಬಾರಿ ದಾಖಲೆ ಪ್ರಮಾಣದ ಮಳೆಯಾದಂತಾಗಿದೆ.

ಕೆಲವೆಡೆ ಸಾಧಾರಣ ಪ್ರಮಾಣದ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಭಾರೀ ಮಳೆಯಾಗಿ ಆಸ್ತಿ ಪಾಸ್ತಿ ಹಾಗೂ ಬೆಳೆ ಹಾನಿಯಾಗಿದೆ.
ಮಂಡ್ಯದಲ್ಲಿ ಬಸ್ ನಿಲ್ದಾಣದಲ್ಲಿ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಧಾರವಾಡ , ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜೋಳ, ಹತ್ತಿ , ಶೇಂಗಾ , ರಾಗಿ , ಭತ್ತ ಸೇರಿದಂತೆ ಮುಂಗಾರು ಹಂಗಾಮಿನ ವಿವಿಧ ಬೆಳೆಗಳು ಹಾನಿಗೀಡಾಗಿವೆ. ರೈತರು ಕೊಯ್ಲು ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಡುವು ಕೊಟ್ಟು ಬಿಸಿಲು ಬಂದರೆ ಮಾತ್ರ ಕೊಯ್ಲು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ರೈತರು ಬೆಳೆದ ಬೆಳೆ ಮಣ್ಣು ಪಾಲಾಗುತ್ತದೆ.

ಇಂದು ಮತ್ತು ನಾಳೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ , ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬಳ್ಳಾರಿ, ಚಿತ್ರದುರ್ಗ , ಹಾಸನ, ಮಂಡ್ಯ ಹಾಗೂ ಕರಾವಳಿ ಭಾಗದಲ್ಲಿ ಮಧ್ಯಮ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಚಾಮರಾಜನಗರ, ಮೈಸೂರು ಭಾಗದಲ್ಲಿ ಭಾಗಶಃ ಮಳೆಯಾಗಲಿದ್ದು , ಉತ್ತರ ಕರ್ನಾಟಕ ಭಾಗದಲ್ಲೂ ಚದುರಿದಂತೆ ಮಳೆಯಾಗಲಿದೆ.ಒಟ್ಟಾರೆ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು , ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶನಿವಾರ ಹೆಚ್ಚು ಮಳೆಯಾಗುವ ಮುನ್ಸೂಚನೆಗಳಿವೆ. ಭಾನುವಾರ ನಿರಂತರವಾಗಿ ಬೀಳುತ್ತಿರುವ ಮಳೆ ಸ್ವಲ್ಪ ಬಿಡುವು ಕೊಡುವ ಸಾಧ್ಯತೆ ಇದ್ದು , ಬಿಸಿಲನ್ನು ನಿರೀಕ್ಷಿಸಬಹುದಾಗಿದೆ ಎಂದರು. ವಾಯುಭಾರ ಕುಸಿತ ಉಂಟಾಗಿದ್ದರೂ ಚಂಡಮಾರುತದಂತೆಯೇ ವ್ಯಾಪಕ ಪ್ರಮಾಣದ ಜಿಟಿ ಜಿಟಿ ಮಳೆಯಾಗುತ್ತಿದೆ ಎಂದು ಅವರು ಹೇಳಿದರು.