ಇಂದೂ ಮಳೆ ಮುಂದುವರಿಕೆ

ಬೆಂಗಳೂರು, ಜ.7- ನಿನ್ನೆ ಮಧ್ಯಾಹ್ನದಿಂದ ಆರಂಭವಾಗಿರುವ ಮಳೆ ಇಂದು ಮುಂದುವರೆದಿದ್ದು, ನಾಳೆಯಿಂದ ಕಡಿಮೆಯಾಗುವ ಮುನ್ಸೂಚನೆಗಳಿವೆ. ನಿನ್ನೆ ಮಧ್ಯಾಹ್ನ ತುಂತುರು ಹನಿಯೊಂದಿಗೆ ಆರಂಭವಾದ ಮಳೆ ಕೆಲವೆಡೆ ನಿರೀಕ್ಷೆಗೂ ಮೀರಿ ಮಳೆಯಾಗಿದೆ.ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಕೆಲವೆಡೆ ಮಳೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್. ಪ್ರಕಾಶ್ ತಿಳಿಸಿದರು.

ಬಳ್ಳಾರಿ ಸೇರಿದಂತೆ ಕೆಲವೆಡೆ ಬೆಳಗಿನಿಂದಲೇ ಮಳೆಯಾಗುತ್ತಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ನಿನ್ನೆ 25 ಮಿ.ಮೀ.ವರೆಗೂ ಮಳೆಯಾಗಿತ್ತು. ಉಡುಪಿಯಲ್ಲಿ 130 ಮೀಟರ್‍ವರೆಗೂ ಮಳೆಯಾಗಿದೆ. ಸರಾಸರಿ 10 ರಿಂದ 30 ಮೀಟರ್‍ವರೆಗೂ ಮಳೆಯಾದ ವರದಿಯಾಗಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಹಲವೆಡೆ ಮಳೆಯಾದ ವರದಿಯಾಗಿದೆ. ಇದರಿಂದ ಮುಂಗಾರು ಹಂಗಾಮಿನ ಭತ್ತ, ರಾಗಿ, ಜೋಳ, ತೊಗರಿ, ಒಕ್ಕಣೆಗೂ ತೊಂದರೆಯಾಗಿದೆ. ಮಾವು ಬೆಳೆ ಹೂ ಬಿಡುವ ಹಂತದಲ್ಲಿದ್ದು, ಅದಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ.

ನಾಳೆಯಿಂದ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಆದರೂ ಕೆಲವೆಡೆ ಚದುರಿದಂತೆ ಮಳೆಯಾಗಲಿದೆ. ರಾಜ್ಯದಲ್ಲಿ ಜ.12ರ ವರೆಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದರು.