ಬೆಂಗಳೂರು,ಆ.2- ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮತ್ತೆ ನಾಲ್ಕು ದಿನ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ನಿನ್ನೆ ಸಂಜೆ ಹಾಗು ರಾತ್ರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ. ಭಟ್ಕಳ, ತುಮಕೂರು, ಬಳ್ಳಾರಿ, ಕೊಪ್ಪಳ ಮೊದಲಾದ ಕಡೆ ಭಾರಿ ಮಳೆಯಾಗಿದೆ.
ಉಡುಪಿ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ರಾಯಚೂರು, ಉತ್ತರಕನ್ನಡ, ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ.
ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗು ರಾತ್ರಿ ವೇಳೆ ಗುಡುಗು ಮಿಂಚಿನಿಂದ ಕೂಡಿದ ಸುರಿ ಮಳೆಯಾಗುವ ಸಾಧ್ಯತೆ ಇದೆ.
ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಮುಂಗಾರು ಮಳೆ ಮತ್ತಷ್ಟು ಚೇತರಿಕೆ ಕಂಡಿದೆ. ದಕ್ಷಿಣ ಭಾರತದ ಒಳಭಾಗದಲ್ಲಿ ಟಿಯರ್ ಜೋನ್( ಕಡಿಮೆ ಒತ್ತಡದ ಮಾರ್ಗ) ಸೃಷ್ಟಿಯಾಗಿರುವುದರಿಂದ ಇನ್ನು ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.