ಬೆಂಗಳೂರು, ಆ.6- ಮಳೆಯ ರೌದ್ರ ನರ್ತನಕ್ಕೆ ರಾಜ್ಯ ಅಕ್ಷರಶಃ ನಲುಗಿ ಹೋಗಿದೆ. ನಿರಂತರ ಮಳೆಯಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕಾಫಿ, ತೆಂಗು, ಅಡಿಕೆ, ಬಾಳೆ ನೀರು ಪಾಲಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕೆರೆ-ಕಟ್ಟೆಗಳು ಕೋಡಿ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕೊಡಗಿನಲ್ಲಿ ಭೂ ಕುಸಿತ ಉಂಟಾಗಿದೆ. ಭಾರೀ ಮಳೆಯಿಂದ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕರಾವಳಿ, ಮಲೆನಾಡು, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹತ್ತ-ಹಲವು ಅನಾಹುತಗಳನ್ನು ಸೃಷ್ಟಿಮಾಡಿದೆ.
ಚಾಮರಾಜನಗರದಲ್ಲಿ ಓಮ್ನಿ ಕಾರಿನ ಮೇಲೆ ಮರ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಸಂತೆಮರಳ್ಳಿ ಸಮೀಪ ಹೆಗ್ಗವಾಡ ಕ್ರಾಸ್ ಬಳಿ ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆ ಭಾರೀ ಮರವೊಂದು ಬಿದ್ದ ಪರಿಣಾಮ ರಾಜು ಮತ್ತು ಶರತ್ ಎಂಬ ತಂದೆ-ಮಗ ಸಾವನ್ನಪ್ಪಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಗದಗ, ಕಲಬುರಗಿ, ವಿಜಯಪುರದಲ್ಲಿ ಭಾರೀ ಮಳೆಯಿಂದ ಜಲಾಶಯಗಳು ಭರ್ತಿಯಾಗಿ ಹರಿದು ಹೊಲಗದ್ದೆಗಳು ಜಲಾವೃತಗೊಂಡು ಸಾವಿರಾರು ಎಕರೆಯಲ್ಲಿದ್ದ ಬೆಳೆ ನಷ್ಟವಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ತುಮಕೂರಿನಲ್ಲಿ ಮಳೆ ಮುಂದುವರೆದಿದ್ದು, ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ದಿಬ್ಬೂರು, ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಮಾನಿಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನೀರು ನುಗ್ಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲಾರದೆ ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ರಾಜಕಾಲುವೆ ಒತ್ತುವರಿಯಿಂದ ಮನೆ, ಅಡಿಕೆ ತೋಟ, ಜಮೀನುಗಳಿಗೆ ನೀರು ನುಗ್ಗಿ ಹಲವು ಅನಾಹುತಗಳನ್ನು ಉಂಟುಮಾಡಿದೆ. ಕಲಬುರಗಿಯಲ್ಲಿ ನಿರಂತರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ, ಉದ್ದು, ಹೆಸರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಹಾಕಿದ್ದ ಬೆಳೆ ಕೈಗೆ ಬರದಂತಾಗಿದೆ.
ದಾವಣಗೆರೆ, ಚನ್ನಗಿರಿ ಮಾರ್ಗದ ಸೇತುವೆ ಜಲಾವೃತಗೊಂಡಿದ್ದು, ಚನ್ನಗಿರಿ, ಶಿರಡೋಣಿ ಹಳ್ಳಗಳು ತುಂಬಿ ಹರಿಯುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ದೋಣಿ ನದಿ ಪ್ರವಾಹ ಮುಂದುವರೆದಿದ್ದು, ಹಳೆ ಸೇತುವೆ ಮುಳುಗಡೆಯಾಗಿದೆ. ಹೊಸ ಸೇತುವೆ ಬಿರುಕು ಬಿದ್ದು ಬೀಳುವ ಹಂತ ತಲುಪಿದೆ.
ಮನಗೂಳಿ ದೇವಾಲಯ ರಾಜ್ಯ ಹೆದ್ದಾರಿ-61ನ್ನು ಬಂದ್ ಮಾಡಲಾಗಿದೆ. ರಾಮನಗರದ ಕಣ್ವ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ನೀರಿನ ರಭಸಕ್ಕೆ ಡಾಂಬರು ಕಿತ್ತುಹೋಗಿ ರಸ್ತೆಗಳು ಹಾಳಾಗಿವೆ. ಹೆಬ್ಬೂರಿನಿಂದ ಮಾಕಳ್ಳಿ, ಉಜ್ಜೈನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಮಳೆಯಿಂದ ತೀವ್ರ ತೊಂದರೆಯಾಗಿದೆ. ಕರಡಿ, ಹುನಗುಂದ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ.
ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಿಂದ ಭದ್ರಾ ನದಿ ಒಳ ಹರಿವಿನಲ್ಲಿ ಏರಿಕೆಯಾಗಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೊರನಾಡು, ಕಳಸಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.
ಕೊಡಗಿನಲ್ಲಿ ಭೂ ಕುಸಿತ ಉಂಟಾಗಿದೆ. ಭಾರೀ ಮಳೆಗೆ 35 ಜಾನುವಾರುಗಳು ಸಾವನ್ನಪ್ಪಿ 265 ಮನೆಗಳಿಗೆ ಹಾನಿಯಾಗಿದ್ದು, ಕೊಯ್ಲಿಗೆ ಬಂದ ಕಾಫಿ ಬೆಲೆ ಉದುರುತ್ತಿದೆ. ರಣಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, ಜನ ಕಂಗಾಲಾಗಿದ್ದಾರೆ.