ರಣಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು, ಕೊಚ್ಚಿಹೋದ ವಾಹನಗಳು

ಬೆಂಗಳೂರು, ಮೇ 20- ಕಂಡರಿಯದ ಭೀಕರ ರಣಮಳೆಗೆ ನಗರದ ಹಲವು ತಗ್ಗು ಪ್ರದೇಶಗಳು ಇನ್ನೂ ನೀರಿನಿಂದ ಆವೃತವಾಗಿವೆ. ಬಿಬಿಎಂಪಿ ಮುಂದೆ ಈ ರೀತಿ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ಗಂಟೆಯಾಗಿದೆ. ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಬಸವೇಶ್ವರನಗರ ವಾರ್ಡ್‍ನ ಹಲವು ಕಡೆಗಳಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಅಪಾರ್ಟ್‍ಮೆಂಟ್, ಕಲ್ಯಾಣಮಂಟಪಗಳಿಗೆ ನೀರು ನುಗ್ಗಿದೆ. ಹಲವಾರು ವಸ್ತುಗಳು ಹಾನಿಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.

ಅಭಿಮಾನಿ ಕನ್ವೆನ್ಷನ್ ಇನ್, ಅಂಬೇಡ್ಕರ್ ಕ್ರೀಡಾಂಗಣ ಸೇರಿದಂತೆ ಆಸುಪಾಸಿನ ರಸ್ತೆಗಳು ನದಿಯಂತೆ ನೀರು ಹರಿದು ಸ್ಥಳೀಯರು ಬೆಚ್ಚಿಬೀಳುವಂತೆ ಮಾಡಿದೆ. ನೀರಿನಲ್ಲಿ ಮುಳುಗಿದ್ದ ವಾಹನಗಳನ್ನು ಈಗ ದುರಸ್ತಿಗಾಗಿ ಟೊಯಿಂಗ್ ಮಾಡಲಾಗುತ್ತಿದೆ. ಕೆಲವು ಅಪಾರ್ಟ್‍ಮೆಂಟ್ ಹಾಗೂ ಕಲ್ಯಾಣಮಂಟಪಗಳ ಕೆಳ ಮಹಡಿಯಲ್ಲಿ ನೀರು ತುಂಬಿದ್ದು, ಇದನ್ನು ಹೊರ ಹಾಕಲು ಅವಿರತ ಪ್ರಯತ್ನ ನಡೆಯುತ್ತಿದೆ.

ನೀರು ಕಾಲುವೆಗಳು ಸರಿಯಾದ ರೀತಿಯಲ್ಲಿ ದುರಸ್ತಿಗೊಳ್ಳದೆ ಇರುವುದರಿಂದ ಈ ಭಾಗದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಗೂ ಸಹ ಹಲವಾರು ಬಾರಿ ಇದರ ಬಗ್ಗೆ ಮನವಿ ಮಾಡಿದರೂ ಕಾಮಗಾರಿ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪದೇ ಪದೇ ಮಳೆ ಬಂದಾಗ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಕೂಡಲೇ ಇದರ ಬಗ್ಗೆ ಸ್ಥಳೀಯ ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಲಾಗಿದೆ.