ಮಳೆಯಿಂದ ಆಗಿರುವ ನಷ್ಟದ ಶೇ.75ರಷ್ಟು ಪರಿಹಾರ ನೀಡಿ : ಹೆಚ್‌ಡಿಕೆ ಒತ್ತಾಯ

ಬೆಂಗಳೂರು, ಮೇ 20-ಮಳೆಯಿಂದ ಆಗಿರುವ ನಷ್ಟದ ಶೇಕಡಾ ಎಪ್ಪತ್ತೈದರಷ್ಟು ಪರಿಹಾರವನ್ನು ಸರ್ಕಾರ ಕೊಡಬೇಕು ಹಾಗೂ ಬೆಂಗಳೂರು ಅಭಿವೃದ್ಧಿಗೆ ಕಳೆದ 15 ವರ್ಷದಲ್ಲಿ ವೆಚ್ಚ ಮಾಡಿದ ಅನುದಾನದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಮಳೆಯಿಂದ ಆಗಿರುವ ನಷ್ಟಕ್ಕೆ ಸರಿಯಾದ ಪರಿಹಾರ ಕೊಡಬೇಕು. ತೋರಿಕೆಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ಅಧಿಕಾರಿಗಳು ಪರಿಹಾರದ ದುಡ್ಡು ಹೊಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ನೆಲಗದರನಹಳ್ಳಿ, ರುಕ್ಮಿಣಿ ನಗರ, ಪೀಣ್ಯಕೈಗಾರಿಕಾ ಪ್ರದೇಶ, ಸಿದ್ದಾರ್ಥ ಕಾಲೋನಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರದಲ್ಲಿ ಉಂಟಾಗಿದ್ದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟು ಸಂಕಷ್ಟಕ್ಕೀಡಾಗಿರುವವರ ಸಮಸ್ಯೆ ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಸಂಕಷ್ಟದಲ್ಲಿರುವ ಜನರ ಜೊತೆ ಚೆಲ್ಲಾಟ ಆಡಬಾರದು. ಹಣ ಮಾಡೋಕೆ ಬೇರೆ ದಾರಿ ಇದೆ. ಹಣ ಲೂಟಿ ಮಾಡೋದು ನಿಲ್ಲಿಸಿ ಎಂದರು. ಜನರ ಬದುಕಿನ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ.

ದಾಸರಹಳ್ಳಿ ಕ್ಷೇತ್ರಕ್ಕೆ ನಾನು 700 ಕೋಟಿ ರೂ.ನೀಡಿದ್ದ. ರಾಜಕಾಲುವೆ ಸರಿ ಮಾಡಲು 130 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಆದರೆ, ಸರ್ಕಾರ ಈ ಹಣವನ್ನು ಡೈವರ್ಟ್ ಮಾಡಿದೆ ಎಂದು ಆರೋಪಿಸಿದರು.28 ಕ್ಷೇತ್ರಗಳಲ್ಲಿ ಎಷ್ಟು ಹಣ 15 ವರ್ಷಗಳಲ್ಲಿ ಬಿಡುಗಡೆ ಮಾಡಿದ್ದಾರೆ ಮಾಹಿತಿ ಪಡೆಯುತ್ತೇನೆ. ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ, ರಾಜರಾಜೇಶ್ವರಿ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎಂಬುದು ಗೊತ್ತಿದೆ.

ಮುಖ್ಯಮಂತ್ರಿಗಳು ಮಂತ್ರಿಗಳ ಕ್ಷೇತ್ರಕ್ಕೆ ಹೋಗುವ ಬದಲು ಜನರ ಸಮಸ್ಯೆಯಲ್ಲಿ ಸಿಲುಕಿರುವ ಕ್ಷೇತ್ರಕ್ಕೆ ಭೇಟಿ ಕೊಡಿ ಎಂದು ಒತ್ತಾಯಿಸಿದರು.1200 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಹೇಳುತ್ತಾರೆ. ಆ ಹಣ ಏನಾಯ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಶಾಸಕರು ಬೆಂಗಳೂರು ಸಭೆ ಮಾಡಲು ಬಿಡಲಿಲ್ಲ. ಕಾಂಗ್ರೆಸ್-ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಕುಮಾರಸ್ವಾಮಿ ಅವರಿಗೆ ಶಾಸಕ ಮಂಜುನಾಥ್, ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಸಾಥ್ ನೀಡಿದರು.