ಬೆಂಗಳೂರು,ಜು.ಆ.3- ಪ್ರವಾಹದಿಂದಾದ ಮನೆ ಹಾನಿಗೆ ಪರಿಹಾರ ಪಡೆದ ಸಂತ್ರಸ್ತರ ಮನೆಗಳು ಪುನಃ ಹಾನಿಯಾದರೆ ಪರಿಹಾರಕ್ಕೆ ಪರಿಗಣಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸಿ ಕೆಟಗರಿ ಪರಿಹಾರ ಪಡೆದಿರುವ ಮನೆಗಳು ಹಾನಿಯಾಗಿದ್ದರೆ ಮಾತ್ರ ಪರಿಗಣಿಸಬಹುದೆಂದು ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಈ ಬಗ್ಗೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಿದ ವೇಳೆ ಈ ಹಿಂದೆ ಪರಿಹಾರ ಪಡೆದು ಮನೆಗಳು ಹಾನಿಗೊಳಗಾಗಿದ್ದರೆ ಪರಿಹಾರ ನೀಡುವ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದ್ದರು.
ಹೀಗಾಗಿ ಹೊಸ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ 2019, 2020 ಹಾಗೂ 2021ನೇ ಸಾಲಿನಲ್ಲಿ ಅತಿವೃಷ್ಟಿ /ಪ್ರವಾಹದಿಂದ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆಗಳು ಪುನಃ ಹಾನಿಗೊಳಗಾದರೆ ಈ ವರ್ಷ ಅವರು ಪರಿಹಾರ ಪಡೆಯಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ 2019-20ನೇ ಸಾಲಿನಲ್ಲಿ ಅಲ್ಪಸ್ವಲ್ಪ ಮನೆ ಹಾನಿಯಾದರೂ ಸಿ ಕೆಟಗರಿಯಲ್ಲಿ ಸರ್ಕಾರದಿಂದ 50 ಸಾವಿರ ರೂ. ಪರಿಹಾರ ಪಡೆದಿರುವ ಮನೆಗಳು ಈ ವರ್ಷದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದರೆ ಎ , ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದೆಂದು ಸರ್ಕಾರ ಸುತ್ತೋಲೆಯಲ್ಲಿ ಸೂಚಿಸಿದೆ.
ವಾಸದ ಮನೆಗೆ ನಿಯಮಾನುಸಾರ ಪರಿಹಾರ ಪಾವತಿಸಬೇಕು. ಆದರೆ ಜಮೀನಿನಲ್ಲಿ ನಿರ್ಮಿಸಿರುವ ಮನೆಗಳು, ಗೋಮಾಳದಲ್ಲಿನ ಮನೆಗಳು ಅನಧಿಕೃತವಾಗಿದ್ದರೆ ಅಫಿಡೆವಿಟ್ ಪಡೆದು ಒಂದು ಲಕ್ಷ ರೂ. ಪಾವತಿಸಬಹುದು.
ವಸತಿ ಯೋಜನೆಯಡಿ ನಿರ್ಮಿಸಿಕೊಂಡು ನೆಲೆಸಿರುವ ಮನೆಗಳು ಪ್ರವಾಹದಿಂದ ಹಾನಿಯಾಗಿದ್ದರೆ ಸರ್ಕಾರದ ಮಾರ್ಗಸೂಚಿಯಂತೆ ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ನೀಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.