ಮಳೆಯಿಂದಾಗುವ ಭೂಕುಸಿತಕ್ಕೆ
ಶಾಶ್ವತ ಪರಿಹಾರ ಹುಡುಕಲು ಸಿಎಂ ಚಿಂತನೆ

Social Share

ಮೈಸೂರು,ಜು.12- ಪದೇ ಪದೇ ಭಾರೀ ಮಳೆಯಿಂದಾಗಿ ಉಂಟಾಗುತ್ತಿರುವ ಭೂ ಕುಸಿತವನ್ನು ಶಾಶ್ವತವಾಗಿ ತಪ್ಪಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದ್ದು, ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರತಿ ವರ್ಷ ಮಳೆ ಬಂದಾಗ ನದಿ ತೀರ ಪ್ರದೇಶ ಹಾಗೂ ಕೆಲವು ಕಡೆ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಲೇ ಇವೆ. ಇದನ್ನು ಶಾಶ್ವತವಾಗಿ ತಪ್ಪಿಸಲು ತಜ್ಞರಿಂದ ವರದಿ ಕೇಳಿದ್ದೇವೆ. ಈ ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೋ ಅದರಂತೆ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ ಸೇರಿದಂತೆ ಮತ್ತಿತರ ಕಡೆ ಮಳೆಯಿಂದಾಗಿ ಇಂತಹ ಅವಘಡಗಳು ಸಂಭವಿಸುತ್ತವೆ. ಭೂ ಕಂಪನ, ಭೂ ಕುಸಿತ, ಮನೆ ಬೀಳುವುದು, ರಸ್ತೆ ಸಂಪರ್ಕ ಕಡಿತಗೊಳ್ಳುವುದು ಸೇರಿದಂತೆ ಹಲವಾರು ಘಟನೆಗಳು ನಡೆಯುತ್ತಲೇ ಇವೆ ಎಂದು ಹೇಳಿದರು.

ಎಲ್ಲೆಲ್ಲಿ ಈ ರೀತಿ ಪ್ರಕೃತಿ ವಿಕೋಪ ಉಂಟಾಗುತ್ತದೆಯೋ ಅದನ್ನು ಶಾಶ್ವತವಾಗಿ ತಪ್ಪಿಸಬೇಕೆಂಬ ಚಿಂತನೆ ಸರ್ಕಾರದ ಮುಂದಿದೆ. ನೆರೆ ಹಾವಳಿ ಉಂಟಾದಾಗ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಕೆಲವು ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಸೇರಿದಂತೆ ಎಲ್ಲಾ ಕಡೆ ಪರಿಹಾರ ಕಾರ್ಯ ಚುರುಕುಗೊಂಡಿದೆ. ಸರ್ಕಾರದ ಬಳಿ ಪರಿಹಾರ ನೀಡಲು ಅಥವಾ ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಎನ್‍ಡಿಆರ್‍ಎಫ್ ಬಳಿ 734 ಕೋಟಿ ಹಣ ಲಭ್ಯವಿದೆ. ಇದನ್ನು ಬಳಸಿಕೊಂಡು ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು.

ಜನಜಾನುವಾರುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ಎಷ್ಟು ಪ್ರಾಣ ಹಾನಿಯಾಗಿವೆ. ಮನೆಗಳ ಕುಸಿತ, ಬೆಳೆ ಹಾನಿ, ರಸ್ತೆಗಳು ಕೊಚ್ಚಿ ಹೋಗಿರುವುದು ಸೇರಿದಂತೆ ಎಲ್ಲವನ್ನು ಸಮೀಕ್ಷೆ ನಡೆಸಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ಇದನ್ನು ನಡೆಸಿದ್ದಾರೆ. ಸಂಜೆಯೊಳಗೆ ನಿಖರವಾದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕೆಲವು ಕಡೆ ಅಣೆಕಟ್ಟೆಗಳಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಪ್ರವಾಹ ಉಂಟಾಗಿದೆ. ಇನ್ನು ಕೆಲವು ಕಡೆ ಅವಘಡ ಸಂಭವಿಸಿವೆ. ನದಿಪಾತ್ರದ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಚುರುಕುಗೊಂಡಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರವಾಸ ನಡೆಸಿ ಅಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರತಿಪಕ್ಷಗಳು ಸುಮ್ಮನೆ ಆರೋಪಕ್ಕಾಗಿ ಆರೋಪ ಮಾಡಬಾರದು. ಲೋಕೋಪಯೋಗಿ, ಇಂಧನ, ಮೀನುಗಾರಿಕೆ ಸೇರಿದಂತೆ ಆಯಾ ಸಚಿವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪ್ರತಿಪಕ್ಷಗಳ ಆರೋಪ ನೂರಕ್ಕೆ ನೂರು ಸುಳ್ಳು ಎಂದು ತಿರುಗೇಟು ನೀಡಿದರು.

ಸಮೀಕ್ಷೆ ನಡೆಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಲು ಮನವಿ ನೀಡಲಾಗುವುದು. ಪ್ರಾಥಮಿಕ ಸಮೀಕ್ಷೆ ಇಲ್ಲದೆ ಬೇಡಿಕೆ ಇಡುವುದು ಸರಿಯಲ್ಲ. ನಮ್ಮ ಅಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ ಎಂದರು.

ಸೂಚನೆ: ಕಳೆದ ಒಂದೂವರೆ ವರ್ಷದಿಂದ ನಿಗಮ ಮಂಡಳಿ ನೇಮಕಗೊಂಡಿರುವ ಅಧ್ಯಕ್ಷರು ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ನಮ್ಮ ಪಕ್ಷದ ಕೋರ್‍ಕಮಿಟಿ ಸಭೆಯಲ್ಲಿ ನಡೆದ ತೀರ್ಮಾನದಂತೆ ಈ ಕ್ರಮ ಕೈಗೊಂಡಿದ್ದೇವೆ. ಬೇರೆಯವರಿಗೆ ಅವಕಾಶ ಕಲ್ಪಿಸಬೇಕು.

ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದೇವೆ ಎಂದು ಪರೋಕ್ಷವಾಗಿ ರಾಜೀನಾಮೆ ನೀಡಲು ಸೂಚನೆ ಕೊಡಲಾಗಿದೆ ಎಂದು ನಿಗಮ ಮಂಡಳಿ ಅಧ್ಯಕ್ಷರಿಗೆ ಸೂಚಿಸಿದರು.

Articles You Might Like

Share This Article