ಮಳೆ ಹಾನಿ ಕುರಿತು ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ

Social Share

ಬೆಂಗಳೂರು,ಸೆ.13-ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದರೂ ರಾಜ್ಯ ಸರ್ಕಾರ ಯಾವುದೇ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಿಲ್ಲ ಏಕೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಅತಿವೃಷ್ಟಿ ಕುರಿತಂತೆ ನಿಯಮ 69ರಡಿ ಮಾತನಾಡಿದ ಅವರು, ಈ ಬಾರಿ ಮಳೆಗಾಲದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಲ್ಲ ರಾಜ್ಯಗಳಿಗೆ ಮುನ್ಸೂಚನೆ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿತ್ತು. ಆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಇಷ್ಟು ದೊಡ್ಡ ಮಟ್ಟದ ಅನಾಹುತ ಸಂಭವಿಸಿದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಬೇಜವಾಬ್ದಾರಿಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 29 ಜಿಲ್ಲೆಗಳಲ್ಲಿ ಪ್ರವಾಹ ಬಂದು ರೈತರ ಬೆಳೆಗಳು, ಮನೆ ಕುಸಿದು, ಜನ-ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಭೀಕರ ಸಮಸ್ಯೆ ಉಂಟಾಗ ಬಹುದೆಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ಕೊಟ್ಟಿತ್ತು. ಈ ಕುರಿತಂತೆ ನಾನು ಕೂಡ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಕಳೆದ ವರ್ಷವು ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸದನದ ಗಮನ ಸೆಳೆದರು.

ಅತಿವೃಷ್ಟಿಯಿಂದ ಒಟ್ಟಾರೆ ಭತ್ತದ ಉತ್ಪಾದನೆಯಲ್ಲಿ ಶೇ. 5.6ರಷ್ಟು ರಾಗಿ ಶೇ.12, ಕಡಲೆ ಶೇ.19.2, ಶೇಂಗಾ ಶೇ.9.6, ಸೋಯಾಬೀನ್ ಶೇ.20.6ರಷ್ಟು ಕಡಿಮೆ ಉತ್ಪಾದನೆಯಾದರೆ ಸರ್ಕಾರ ಯಾವ ಪರ್ಯಾಯ ಕ್ರಮ ಕೈಗೊಂಡಿದೆ ಎಂದರು.
ಜೋಳ ಶೇ.24.5, ಕಬ್ಬು ಶೇ.6.1 ಹಾಗೂ ಹತ್ತಿ ಬೆಳೆ ಹೆಚ್ಚಾಗ ಬಹುದೆಂದು ಹವಾಮಾನ ತಜ್ಞರು ಹೇಳಿದ್ದಾರೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿ, ಬಯಲು ಸೀಮೆಯಲ್ಲಿ ವ್ಯಾಪಕ ಮಳೆಯಾಗಿದೆ. ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿ ಇದೆ ಎಂದು ವಿವರಣೆ ನೀಡಿದರು. ನಾನು ಬೆಂಗಳೂರಿನ ಮಹದೇವಪುರದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿ ರಸ್ತೆ ಮೇಲೆ ಕಾಲಿಡಲು ಸಾಧ್ಯವಾಗದೆ ದೋಣಿ ಮೇಲೆ ಹೋಗುವ ಪರಿಸ್ಥಿತಿ ಇತ್ತು. ಪರಿಸ್ಥಿತಿ ಇಷ್ಟು ಹದಗೆಡುತ್ತದೆ ಎಂದು ಊಹೆ ಮಾಡಲು ಸಾಧ್ಯವಿರಲಿಲ್ಲ ಎಂದರು.

ಆಗ ಶಾಸಕ ಅರವಿಂದ ಲಿಂಬಾವಳಿ, ರಸ್ತೆ ಇದ್ದರೂ ನೀವು ದೋಣಿಯಲ್ಲಿ ಏಕೆ ಪ್ರಯಾಣಿಸಿದಿರಿ ಎಂದು ಸಿದ್ದರಾಮಯ್ಯನವರ ಕಾಲೆಳೆಯುವ ಪ್ರಯತ್ನ ಮಾಡಿದರು. ಇದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ನಾನು ಬರುವುದು ಗೊತ್ತಿದ್ದು, ನೀವು ಬಂದಿದ್ದರೆ ಬೇರೆ ರಸ್ತೆಯಲ್ಲಿ ಹೋಗಬಹುದಿತ್ತು. ನೀವು ಕರೆದುಕೊಂಡು ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.

ನೀವು ಬರುತ್ತೀರಿ ಎಂಬುದು ಗೊತ್ತಿದ್ದರೆ ಖಂಡಿತವಾಗಿಯೂ ನಾವು ಸ್ವಾಗತ ಮಾಡುತ್ತಿದ್ದೆವು ಎಂದು ಲಿಂಬಾವಳಿ ಹೇಳುತ್ತಿದ್ದಂತೆ, ನಾನು ಹೋದ ರಸ್ತೆಯಲ್ಲೆಲ್ಲ ನೀರು ಇತ್ತು. ಕೆಲವರು ನಿಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಆಗ ಮಾಜಿ ಶಾಸಕ ರಾಮಲಿಂಗಾರೆಡ್ಡಿ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವ ರಸ್ತೆಗೆ ಹೋಗಿದ್ದಾರೋ ಅದೇ ರಸ್ತೆಯಲ್ಲಿ ನಾವು ಹೋಗಿದ್ದೆವು. ನೀವು ಯಾವ ರಸ್ತೆ ಹೇಳುತ್ತಿದ್ದೀರೋ ನಮಗೂ ಗೊತ್ತಿಲ್ಲ. ನಾವು ಹೋದಲ್ಲಲ್ಲ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು ಎಂದು ಸಮರ್ಥಿಸಿಕೊಂಡರು.

ಈ ವೇಳೆ ಬೊಮ್ಮಾಯಿ ಅವರು, ಒಂದೂವರೆ ಅಡಿ ನೀರಿನಲ್ಲಿ ನಿಮ್ಮ ನಾಯಕರನ್ನು ದೋಣಿಯಲ್ಲಿ ಕರೆದುಕೊಂಡು ಹೋದವರು ಯಾರಪ್ಪ ಎಂದು ಕಾಂಗ್ರೆಸ್‍ನವರ ಕಾಲೆಳೆಯುವ ಪ್ರಯತ್ನ ಮಾಡಿದರು. ಆಗ ಸಿದ್ದರಾಮಯ್ಯ, ಒಂದೂವರೆ ಅಡಿ ನೀರಿನಲ್ಲಿ ದೋಣಿ ಹೋಗಲು ಸಾಧ್ಯವೇ ಇಲ್ಲ. ಮಾಧ್ಯಮಗಳಲ್ಲಿ ಬಿತ್ತರವಾದ ಪ್ರಳಯ ಸದೃಶ್ಯ ನೀರು ನಿಂತಿದ್ದನ್ನು ನೋಡಿ ಜನರ ಪರಿಸ್ಥಿತಿ ವಿಚಾರಿಸಲು ಹೋಗಿದ್ದೆ.

ಮೊದಲು ನಾವು-ನೀವು ಜೊತೆಗೆ ಹೋಗಿ ಜನರನ್ನು ಭೇಟಿ ಮಾಡೋಣ. ಜನರನ್ನೇ ಕೇಳೋಣ, ಒಂದು ವೇಳೆ ನೀವು ಹೇಳಿದ ಹಾಗೆ ಒಂದೂವರೆ ಅಡಿ ನೀರು ಇತ್ತು ಎಂದರೆ ನನ್ನದೇನೂ ತಕರಾರು ಇಲ್ಲ ಎಂದರು. ಆಗ ಮತ್ತೆ ಬೊಮ್ಮಾಯಿ ಅವರು ನಾನು ರಸ್ತೆಯಲ್ಲಿ ಮೂರುವರೆ ಅಡಿ ನೀರಿದ್ದಾಗ ಹೋಗಿದ್ದೇನೆ. ಕೆಲವರು ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು ಎಂದು ಕಿಚಾಯಿಸಿದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ಕಳೆದ ವರ್ಷ ಪ್ರವಾಹ ಉಂಟಾಗಿ ಅನೇಕ ಕಡೆ ಬೆಳೆ ಕೊಚ್ಚಿ ಹೋಗಿ, ಮನೆಗಳು ಉರುಳಿಬಿದ್ದಿವೆ. ಸರ್ಕಾರ ಈವರೆಗೂ ಸಮೀಕ್ಷೆಯನ್ನೂ ನಡೆಸಲಿಲ್ಲ. ಅವರಿಗೆ ಒಂದು ವರ್ಷವಾದರೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ನಾನು ಬೆಳೆಹಾನಿ ಸಮೀಕ್ಷೆ ನಡೆಸಿ ಯಾರ್ಯಾರಿಗೆ ಎಷ್ಟೆಷ್ಟು ನಷ್ಟವಾಗಿದೆಯೋ ಅಂತಹ ಪಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದ್ದೇನೆ ಎಂದರು.

ಇಡೀ ದೇಶದಲ್ಲಿ ಎನ್‍ಡಿಆರ್‍ಎಫ್ ನಿಯಮಾವಳಿಯನ್ನು ಮೀರಿ ಅತಿಹೆಚ್ಚು ಪರಿಹಾರ ನೀಡಿದ ಏಕೈಕ ಸರ್ಕಾರ ಕರ್ನಾಟಕ. ಇದಕ್ಕೆ ನೀವು ನಮಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು. ಆದರೆ ಅಶೋಕ್ ಅವರ ಮಾತನ್ನು ಸಿದ್ದರಾಮಯ್ಯ ಒಪ್ಪಲಿಲ್ಲ. ಅನೇಕ ಕಡೆ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಮಳೆ ಹಾನಿ ಪರಿಹಾರ ಪಡೆಯಲು ಜನರು ಇಲಾಖೆಯಿಂದ ಇಲಾಖೆಗೆ ಅಲೆಯುತ್ತಿದ್ದಾರೆ ಇದು ನಿಮ್ಮ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಿಂದಿನ ಯಾವುದೇ ಸರ್ಕಾರಗಳು ಕೊಡದಿರುವಷ್ಟು ಪರಿಹಾರವನ್ನು ನಾವು ಕೊಟ್ಟಿದ್ದೇವೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ನಿಯಮಾವಳಿಯನ್ನು ಮೀರಿ ಹೆಚ್ಚಿನ ಪರಿಹಾರ ನೀಡಿದ ಏಕೈಕ ರಾಜ್ಯ ಎಂದರೆ ಕರ್ನಾಟಕ. ನಿಮ್ಮ ಸರ್ಕಾರದ ಅವಯಲ್ಲಿ ಪರಿಹಾರ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ ಎಂದು ತಿರುಗೇಟು ನೀಡಿದರು.

Articles You Might Like

Share This Article