ಬೆಂಗಳೂರು, ಮಾ.23– ರಾಜಧಾನಿ ಬೆಂಗಳೂರು ಸೇರಿದಂತೆ ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಮಿಂಚಿನಿಂದ ಮಳೆಯಾಗುವ ಸಾಧ್ಯತೆಗಳಿವೆ. ನಾಳೆಯಿಂದ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಒಂದೆರೆಡು ದಿನ ಮುಂದುವರೆಯುವ ಮುನ್ಸೂಚನೆಗಳಿವೆ.
ಕಳೆದ ಮೂರು ತಿಂಗಳಿನಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆದಂತಾಗಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ಗಾಳಿ, ಮಿಂಚು, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಕೆಲವೆಡೆ ಮಳೆಯಾಗಿದ್ದರೆ ಮತ್ತೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಟ ತಾಪಮಾನ ಈಗಾಗಲೇ ಸರಾಸರಿ 35 ಡಿ.ಸೆಂ. ಗಿಂತ ಹೆಚ್ಚಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಡಿ.ಸೆಂ. ದಾಟಿತ್ತು. ಹೀಗಾಗಿ ರಾಜ್ಯ ಕಾದ ಬಾಣಲಿಯಂತೆ ಆಗಿತ್ತು. ತಾಪಮಾನ ಏರಿಕೆಯಿಂದಾಗಿ ನಿನ್ನೆ ಮುಂಗಾರು ಪೂರ್ವ ಬೇಸಿಗೆ ಮಳೆ ಕೆಲವೆಡೆ ಬಿದ್ದಿದೆ.
ಬಿರುಗಾಳಿ ಸಹಿತ ಮಳೆಗೆ ಬೆಂಗಳೂರು ಸೇರಿದಂತೆ ಕೆಲವೆಡೆ ಮರಗಳು ಧರೆಗುರುಳಿವೆ. ಬೆಂಗಳೂರಿನ ಜೆ.ಸಿ.ರಸ್ತೆ, ಕಮ್ಮನಹಳ್ಳಿಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಾಮರಾಜನಗರ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ 61.8 ಮಿ.ಮೀನಷ್ಟು ಮಳೆಯಾಗಿದೆ. ಹೊಸಕೋಟೆ 55.2 ಮಿ.ಮೀ., ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ 47.4 ಮಿ.ಮೀ., ಮಾಗಡಿ 25 ಮಿ.ಮೀ., ಹೆಸರುಘಟ್ಟ 23.6ಮಿ.ಮೀ., ಮೈಸೂರಿನ ಸರಗೂರು 20.6 ಮಿ.ಮೀ., ಚಿಂತಾಮಣಿ 20 ಮಿ.ಮೀ., ನೆಲಮಂಗಲ 18.4 ಮಿ.ಮೀ., ಕೋಲಾರ ಜಿಲ್ಲೆಯ ರಾಯಲಕೊಡುವಿನಲ್ಲಿ 18 ಮಿ.ಮೀ., ಬೇಲೂರಿನಲ್ಲಿ 16.6 ಮಿ.ಮೀ., ಎಲೆಕ್ಟ್ರಾನಿಕ್ ಸಿಟಿಯಲ್ಲಿ 14 ಮಿ.ಮೀ.. ಮಲೆಮಹದೇಶ್ವರ ಬೆಟ್ಟದಲ್ಲಿ 12 ಮಿ.ಮೀ., ಬೆಂಗಳೂರು ನಗರ 11.8 ಮಿ.ಮೀ., ಕನಕಪುರ 10.4 ಮಿ.ಮೀ., ಕೊಡಗಿನ ನಾಪೋಕ್ಲು 8.8 ಮಿ.ಮೀ.. ಬಂಡೀಪುರ 6.5 ಮಿ.ಮೀ., ದೊಡ್ಡಬಳ್ಳಾಪುರ 4.8 ಮಿ.ಮೀ., ನೆಲಮಂಗಲ 4.6 ಮಿ.ಮೀ. ರಷ್ಟು ಮಳೆಯಾಗಿದ್ದು, ಉಳಿದಂತೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ಭಾಗಶಃ ಮೋಡ ಕವಿದ ವಾತಾವರಣವಿದ್ದು ಸಂಜೆ ಹಾಗೂ ರಾತ್ರಿ ವೇಳೆ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕೆಲವೆಡೆ ಮಿಂಚು, ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ. ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.