ಬೆಂಗಳೂರಲ್ಲಿ ಮಳೆ ಸಮಸ್ಯೆಗೆ ಸ್ಪಂದಿಸಲು ಅಷ್ಟದಿಕ್ಪಾಲಕರ ತಂಡ ರಚನೆ

Spread the love

ಬೆಂಗಳೂರು, ಮೇ 20- ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನರ ರಕ್ಷಣೆಗಾಗಿ ಅಷ್ಠ ದಿಕ್ಕುಗಳಿಗೂ ಸಚಿವರ ತಂಡ ನಿಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿಕೊಟ್ಟು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಳೆ ನೀರು ನಿರ್ವಹಣೆಗೆ ಕಾರ್ಯಪಡೆಯನ್ನು ರಚಿಸಲಾಗುವುದು. ನಗರದ ಅಷ್ಠ ದಿಕ್ಕುಗಳಿಗೂ ಸಚಿವರನ್ನು ನಿಯೋಜನೆ ಮಾಡುತ್ತೇವೆ. ಸಂಜೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಒಂದೊಂದು ಕಾರ್ಯಪಡೆಯಲ್ಲೂ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಇರುತ್ತಾರೆ.

ನಗರದ ಯಾವುದೇ ಭಾಗದಲ್ಲಿ ಮಳೆಯಿಂದ ತೊಂದರೆಗೊಳಗಾದರೆ ಸಾರ್ವಜನಿಕರು ಇವರನ್ನು ಸಂಪರ್ಕಿಸಬಹುದು. ಕೂಡಲೇ ಇವರು ರಕ್ಷಣೆಗೆ ಧಾವಿಸುತ್ತಾರೆ ಎಂದು ಹೇಳಿದರು. ಕಳೆದ ಎರಡು ದಿನಗಳಿಂದ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸ್ವತಃ ನಾನೇ ಖುದ್ದು ಭೇಟಿ ಕೊಟ್ಟು ವಸ್ತು ಸ್ಥಿತಿ ಅರಿಯುವ ಪ್ರಯತ್ನ ಮಾಡಿದ್ದೇನೆ. ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರದ ಅಭಿವೃದ್ಧಿ, ಕಾಮಗಾರಿ ಪರಿಶೀಲನೆ ಮತ್ತು ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚನೆಯಾದರೆ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಅನುಕೂಲವಾಗುತ್ತದೆ. ಹೀಗಾಗಿಯೇ ನಾವು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಇಂದು ನಗರದ ಅನೇಕ ಕಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ನಿನ್ನೆ ಒಂದು ಭಾಗಕ್ಕೆ ಭೇಟಿ ನೀಡಲಾಗಿತ್ತು. ರಾಮಮೂರ್ತಿನಗರದ ರೈಲ್ವೆ ಭಾಗದಲ್ಲಿ ಸಮಸ್ಯೆ ಇದೆ. 42 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಸಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು.

ಈ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಂಚಾರ ದಟ್ಟಣೆ ಜತೆಗೆ ಚರಂಡಿಯಿಂದ ನೀರು ಸರಾಗವಾಗಿ ಹರಿದು ರಾಜಕಾಲುವೆ ಸೇರುತ್ತದೆ. ಇದಕ್ಕಾಗಿ 900 ಮೀಟರ್ ಹೆಚ್ಚುವರಿ ಚರಂಡಿ ಕಾಮಗಾರಿ ಆರಂಭಿಸುತ್ತೇವೆ ಎಂದು ಸಿಎಂ ತಿಳಿಸಿದರು.

ಕೆಲವು ಭಾಗಗಳಲ್ಲಿ ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಲೇ ನೀರು ತಗ್ಗು ಪ್ರದೇಶ ಮತ್ತು ವಸತಿ ನಿವಾಸಗಳಿಗೆ ನುಗ್ಗುತ್ತದೆ. ಇದನ್ನು ಶೀಘ್ರದಲ್ಲೇ ತೆರವುಗೊಳಿಸುವ ಕಾರ್ಯ ಆರಂಭವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಸದ್ಯದಲ್ಲೇ ಸೂಚನೆ ನೀಡುತ್ತೇನೆ ಎಂದು ವಿವರಿಸಿದರು.

ಕೆರೆ ಜಾಗಗಳಲ್ಲಿ ಬಿಡಿಎ ವಸತಿ ನಿರ್ಮಾಣಕ್ಕಾಗಿ ಹೊರಡಿಸಿದ್ದ ಅಧಿಸೂಚನೆಯನ್ನು ನಿನ್ನೆ ರದ್ದು ಪಡಿಸಲಾಗಿದೆ. 2007-08ರಲ್ಲಿ ಬಿಡಿಎ ಇದನ್ನು ಹೊರಡಿಸಿತ್ತು. ಇದು ಟೈಪೋಗ್ರಫಿ ಎಂದು ತಿಳಿಸಿದ್ದರು. ಯಾವುದೇ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಕಾರಣಕ್ಕಾಗಿ ಬಿಡಿಎ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದ್ದೇವೆ ಎಂದು ಸಿಎಂ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಬೆಳ್ಳಂಬೆಳಗ್ಗೆಯೇ ಸಿಎಂ ಬೊಮ್ಮಾಯಿ ಅವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಭೇಟಿ ಕೊಟ್ಟು ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು. ಮೊದಲು ಹೊರಮಾವಿನಲ್ಲಿರುವ ಶ್ರೀ ಸಾಯಿ ಲೇಔಟ್‍ಗೆ ಭೇಟಿ ನೀಡಿದರು. ನಂತರ ಕೆ.ಆರ್.ಪುರಂ , ರಾಮಮೂರ್ತಿನಗರ ಮತ್ತಿತರ ಕಡೆ ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲು ಆಲಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸಬವರಾಜ, ಬಿಬಿಎಂಪಿ ಆಯುಕ್ತ ತುಷಾರ್‍ಗಿರಿನಾಥ್ ಸೇರಿದಂತೆ ಮತ್ತಿತರರು ಇದ್ದರು.

Facebook Comments