ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರಿಕೆ

Social Share

ಬೆಂಗಳೂರು, ಅ.14- ಕಳೆದ ಒಂದು ವಾರದಿಂದ ರಾಜ್ಯ ಒಳನಾಡಿನಲ್ಲಿ ಮಳೆಯಾಗುತ್ತಿದ್ದು , ಮತ್ತೆ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ.ಮೇಲ್ಮೈ ಸುಳಿಗಾಳಿ ಹಾಗೂ ನೈರುತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಪ್ರಾರಂಭ ವಾಗಿರುವ ಹಿನ್ನೆಲೆಯಲ್ಲಿ ಮಳೆ ಮುಂದು ವರೆಯುತ್ತಿದೆ.

ಈಗಿರುವ ಹವಾಮಾನ ಮುನ್ಸೂಚನೆ ಪ್ರಕಾರ ಅ.20-21ರವರೆಗೆ ಮಳೆ ಮುಂದುವರೆಯಲಿದೆ. ಅ.17ರ ನಂತರ ಮಳೆ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕೆಲವೆಡೆ ಮಳೆ ಕಡಿಮೆಯಾಗಬಹುದು, ಮತ್ತೆ ಕೆಲವೆಡೆ ಹೆಚ್ಚು ಆಗಬಹುದು.

ಆದರೆ, ಮಳೆ ಚದುರಿದಂತೆ ಅಲ್ಲಲ್ಲಿ ಮುಂದುವರೆಯುತ್ತಲೇ ಇರುತ್ತದೆ. ಮುಂಗಾರು ಮರಳುವಿಕೆ ಹಾಗೂ ಈಶಾನ್ಯ ಹಿಂಗಾರು ಆರಂಭವಾಗುವ ಪರ್ವ ಕಾಲ ಇದಾಗಿದ್ದು , ಈ ಸಂದರ್ಭದಲ್ಲಿ ಮಳೆ ಯಾಗುವುದು ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ.

ಅ.20-21ರ ವೇಳೆಗೆ ನೈರುತ್ಯ ಮುಂಗಾರು ರಾಜ್ಯದಿಂದ ಮರಳುವ ಸಾಧ್ಯ ಇದೆ. ಅನಂತರ ಹಿಂಗಾರು ಮಳೆ ಆರಂಭವಾಗಲಿದೆ. ಕಳೆದ ಒಂದು ವಾರದಿಂದ ಬಿಟ್ಟುಬಿಡದಂತೆ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣ ಇಲ್ಲವೆ ಹಗುರ ಮಳೆಯಾಗುತ್ತಿದೆ. ಕೆಲವೆಡೆ ಭಾರೀ ಮಳೆಯಾಗಿರುವ ವರದಿಯೂ ಆಗಿದೆ.

ನಿನ್ನೆ ಹಾಗೂ ರಾತ್ರಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಕಡೆ ವ್ಯಾಪಕ ಪ್ರಮಾಣದ ಮಳೆಯಾಗಿದ್ದು , ಕೆಲವೆಡೆ ಸಾಧಾರಣ ಮಳೆಯಾಗಿದೆ. ಇನ್ನೂ ಕೆಲವು ಕಡೆ ಭಾರೀ ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ದಕ್ಷಿಣಕನ್ನಡ, ಚಿಕ್ಕಮಗಳೂರು, ಕಲ್ಬುರ್ಗಿ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ.

ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಮೋಟ ಕವಿದ ವಾತಾವರಣ ಕಂಡು ಬರಲಿದ್ದು, ಆಗ್ಗಾಗ್ಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Articles You Might Like

Share This Article