ಬೆಂಗಳೂರು,ಜು.19- ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ನದಿಗಳ ಪ್ರವಾಹ ಮಾತ್ರ ನಿಂತಿಲ್ಲ. ಕಳೆದ ಮೂರು ವಾರಗಳಿಂದ ಆರ್ಭಟಿಸುತ್ತಿದ್ದ ಮುಂಗಾರು ಮಳೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತುಸು ಕಡಿಮೆಯಾಗಿದೆ.
ಉಳಿದಂತೆ ರಾಜ್ಯದ ಒಳನಾಡಿನಲ್ಲಿ ಹಗುರ ಮಳೆಯಾದ ವರದಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾದ ವರದಿಯಾಗಿಲ್ಲ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರೆದಿದೆ. ನಿರಂತರವಾಗಿ ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳ ಪ್ರವಾಹ ಮುಂದುವರೆದಿದೆ. ಜಲಾಶಯಗಳ ಒಳಹರಿವಿನ ಪ್ರಮಾಣವು ಇಳಿಕೆಯಾಗುತ್ತಿದ್ದು, ಹೊರಹರಿವಿನ ಪ್ರಮಾಣವು ಕಡಿಮೆಯಾಗುತ್ತಿದೆ.
ಮಳೆ ಪ್ರಮಾಣ ತಗ್ಗಿರುವುದರಿಂದ ಒಂದೆರಡು ದಿನಗಳಲ್ಲಿ ಪ್ರವಾಹ ಪರಿಸ್ಥಿತಿಯು ನಿಯಂತ್ರಣಕ್ಕೆ ಬರಲಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿವೆ. ನಿರಂತರವಾಗಿ ಬಿದ್ದ ಮಳೆಯಿಂದಾಗಿ ಬಹಳಷ್ಟು ಕಡೆ ಅತಿವೃಷ್ಟಿ ಉಂಟಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಕಾಫಿ, ಅಡಿಕೆ, ಏಲಕ್ಕಿ, ಮೆಣಸು ಮೊದಲಾದ ಬೆಳೆಗಳಿಗೂ ಹಾನಿ ಉಂಟಾಗಿದೆ.
ರಾಜ್ಯದ ಒಳನಾಡಿನ ಬಹಳಷ್ಟು ಕಡೆ ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದ್ದರೆ ಬಹಳಷ್ಟು ಕಡೆ ಸಾಕಷ್ಟು ಮಳೆಯಾಗದೆ ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ಒಂದೆಡೆ ಅತಿವೃಷ್ಟಿ, ಪ್ರವಾಹ ಉಂಟಾಗಿದ್ದರೆ ಮತ್ತೊಂದೆಡೆ ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟ ಎದುರಿಸುವಂತಾಗಿರುವುದು ವಿಪರ್ಯಾಸದ ಸಂಗತಿ. ಪ್ರವಾಹದಿಂದಾಗಿ ನದಿ ಪಾತ್ರದಲ್ಲಿ ಬೆಳೆಯು ಸಾಕಷ್ಟು ಹಾನಿಗೀಡಾಗಿದೆ. ಬಹಳಷ್ಟು ಕಡೆ ರಸ್ತೆ ಹಾಳಾಗಿವೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇದ್ದು ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆ ಇನ್ನು ಎರಡು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ಆದರೆ ಭಾರೀ ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.