ರಾಜ್ಯದಲ್ಲಿ ಇನ್ನೂ 5 ದಿನ ಮಳೆ

Spread the love

ಬೆಂಗಳೂರು, ಮೇ 13- ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಅಸಾನಿ ಚಂಡಮಾರುತ ಕ್ಷೀಣವಾಗಿದ್ದರೂ ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕಳೆದ ಎರಡು ವಾರಗಳಿಂದ ರಾಜ್ಯದ ಒಳನಾಡಿನಲ್ಲಿ ಬೀಳುತ್ತಿರುವ ಮಳೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಬೀಳುತ್ತಿದ್ದು, ಮೋಡ ಮುಸುಕಿದ ವಾತಾವರಣ ಕಂಡುಬಂದಿದ್ದು, ತಂಪಾದ ಮೇಲ್ಮೈ ಗಾಳಿಯೂ ಬೀಸುತ್ತಿತ್ತು.

ಅಸಾನಿ ಚಂಡಮಾರುತವು ಕ್ಷೀಣವಾಗಿದ್ದು, ನಿರೀಕ್ಷೆಯಂತೆ ಅದರ ಪ್ರಭಾವ ಕಡಿಮೆಯಾಗತೊಡಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ವಿಶೇಷ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ನಾಳೆಯಿಂದ ಮೋಡದ ಪ್ರಮಾಣ ಕಡಿಮೆಯಾಗಲಿದ್ದು, ಬಿಸಿಲಿನ ವಾತಾವರಣ ಕಂಡುಬರಲಿದೆ. ಆದರೂ ಆಗಾಗ್ಗೆ ಕೆಲವೆಡೆ ಹಗುರ ಇಲ್ಲವೆ ಸಾಧಾರಣ ಮಳೆ ಮುಂದುವರಿಯಲಿದೆ.
ದುರ್ಬಲಗೊಂಡಿರುವ ಚಂಡಮಾರುತವು ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಷೀಣಗೊಂಡ ನಂತರ ಪುನಾರಚನೆಯಾಗಿ ಮತ್ತೆ ಚಂಡಮಾರುತದ ಸ್ವರೂಪ ಪಡೆಯಲಿದೆಯೇ ಅಥವಾ ಇಲ್ಲವೆ ಎಂಬುದನ್ನು ಇನ್ನೆರಡು ದಿನ ಕಾದು ನೋಡಬೇಕು. ಅಸಾನಿ ಚಂಡಮಾರುತದಿಂದಾಗಿ ನೈಋತ್ಯ ಮುಂಗಾರು ಅವಗಿಂತ ಮುಂಚೆಯೇ ಆಗಮಿಸುವ ಸೂಚನೆಗಳು ಕಂಡುಬರುತ್ತಿವೆ.

ಸಾಮಾನ್ಯವಾಗಿ ಜೂ.1ರಂದು ಕೇರಳ, ಕರಾವಳಿಯನ್ನು ಮುಂಗಾರು ಪ್ರವೇಶಿಸುತ್ತಿದ್ದು, ಆನಂತರ ನಾಲ್ಕೈದು ದಿನಗಳಲ್ಲಿ ರಾಜ್ಯ ಪ್ರವೇಶಿಸುವುದು ವಾಡಿಕೆ. ಬಳಿಕ ಎರಡು ವಾರದಲ್ಲಿ ಉತ್ತರ ಕರ್ನಾಟಕ ಪ್ರವೇಶಿಸುತ್ತಿತ್ತು. ಈ ವರ್ಷ ಅವಗಿಂತ ಎಷ್ಟು ದಿನ ಮುಂಚಿತವಾಗಿ ಮುಂಗಾರು ಪ್ರವೇಶಿಸಲಿದೆ ಎಂಬುದು ಸದ್ಯದಲ್ಲೇ ಖಚಿತವಾಗಲಿದೆ ಎಂದರು.

ಚಂಡಮಾರುತ ದುರ್ಬಲವಾಗಿದ್ದರೂ ಮೇ 17ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಭಾನುವಾರದಿಂದ ಮಂಗಳವಾದವರೆಗೂ ಸ್ವಲ್ಪ ಹೆಚ್ಚಿನ ಪ್ರಮಾಣದ ಮಳೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗ ಹಾಗೂ ಒಳನಾಡಿನಲ್ಲಿ ಬೀಳುವ ಸಾಧ್ಯತೆಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.

Facebook Comments