ಬೆಂಗಳೂರು, ಮೇ 20-ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಧಾರಾಕಾರ ಮಳೆಯಾಗಿದ್ದು, ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಮಲೆನಾಡು ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರಂಜ್ ಅಲರ್ಟ್ ನೀಡಿದೆ.
ಇನ್ನೊಂದು ವಾರದಲ್ಲಿ ನೈರುತ್ಯ ಮುಂಗಾರು ಪ್ರಾರಂಭವಾಗಲಿದ್ದು, ಈಗಾಗಲೇ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಕಡು ಬೇಸಿಗೆಯಲ್ಲೇ ನಿರಂತರ ಮಳೆಯಿಂದಾಗಿ ಗರಿಷ್ಠ ತಾಪಮಾನದಲ್ಲಿ ಗಣನೀಯ ಕುಸಿತವಾಗಿ ವಾತಾವರಣ ತಂಪಾಗಿದ್ದು, ಚಳಿಯ ಅನುಭವವಾಗುತ್ತಿದೆ.
ಮುಂಗಾರು ಆರಂಭಕ್ಕೂ ಮುನ್ನ ವಾತಾವರಣದಲ್ಲಿ ಬದಲಾವಣೆಗಳಾಗಿ ಮಳೆಗೆ ಪೂರಕ ವಾತಾವರಣ ಸೃಷ್ಟಿಯಾಗುವುದು ವಾಡಿಕೆ. ಅದರಂತೆ ಈ ಬಾರಿ ನಿರೀಕ್ಷೆಗೂ ಮೀರಿದ ಬದಲಾವಣೆಗಳು ಉಂಟಾಗಿದ್ದು, ಈಗಾಗಲೇ ವ್ಯಾಪಕ ಪ್ರಮಾಣದ ಮಳೆಯಾಗುತ್ತಿದೆ.
ಬಂಗಾಳ ಕೊಲ್ಲಿಯ ತಮಿಳುನಾಡು ಮತ್ತು ಅಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಮೇಲೈ ಸುಳಿಗಾಳಿ ಉಂಟಾಗಿದೆ. ರಾಜ್ಯದ ಒಳನಾಡಿನಲ್ಲಿ ಟ್ರಫ್ ಇದ್ದು, ಅರಷ್ಟೇ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ವ್ಯಾಪಕ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎನ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಕರಾವಳಿಗೆ ಹೊಂದಿಕೊಂಡಂತೆ ಅರಷ್ಟೇ ನಮುದ್ರದಲ್ಲಿ ಮೇ 22ರಂದು ವಾಯುಭಾರ ಕುಸಿತವು ಉಂಟಾಗುವ ಸಾಧ್ಯತೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದ್ದಾರೆ.
ಮೇ 24ರ ವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ, ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಕೆಲವಡೆ ಆಗಾಗ್ಗೆ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ.
ಮಳೆಯ ಜೊತೆಗೆ ಗಾಳಿಯು ಗಂಟೆ 40-50 ಕಿ.ಮೀ. ವೇಗದಲ್ಲಿ ಬೀನಲಿದೆ, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಹಾಗೂ ಕೆಲವಡೆ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರೀ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮೇ 25ರಿಂದ ಮಳ ಪ್ರಮಾಣ ಕಡಿಮೆಯಾದರೂ ಈ ತಿಂಗಳ ಅಂತ್ಯದವರೆಗೆ ಮಳೆ ಮುಂದುವರೆಯಲಿದೆ. ಮೇ 27ಕ್ಕೆ ಗೈರುತ್ಯ ಮುಂಗಾರು ಪ್ರಾರಂಭವಾಗುವ ಮುನ್ಸೂಚನೆ ಇದ್ದು, ನಿರೀಕ್ಷೆಯಂತೆ ಮುಂಗಾರು ಆರಂಭಗೊಂಡರ ಮೇ ಅಂತ್ಯದವರೆಗೂ ಮಳೆ ಬಿಡುವು ಕೊಡುವ ಸಾಧ್ಯತೆ ವಿರಳ.