ಬೆಂಗಳೂರು,ಜು.17- ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಕರೆದಿರುವ ಜಾರಿ ನಿರ್ದೇಶನಾಲಯದ ಕ್ರಮ ವಿರೋಧಿಸಿ ಕಾಂಗ್ರೆಸ್ ಜು.21ರಂದು ರಾಜಭವನ ಮುತ್ತಿಗೆ ಹಮ್ಮಿಕೊಂಡಿದೆ.
ನಗರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತುರ್ತು ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆಯ ಮಾಹಿತಿ ತಿಳಿಸಿದರು.
ಬಿಜೆಪಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಕಪ್ಪು ಮಸಿ ಬಳಿಯುವ ಯತ್ನ ಮಾಡುತ್ತಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದು ಹೋದ ಅಧ್ಯಾಯ ಎಂದು ಹಣಕಾಸು ಸಚಿವರಾಗಿದ್ದ ಅರುಣ್‍ಜೈಟ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಆದರೂ ಮತ್ತೆ ವಿವಾದವನ್ನು ಕೆಣಕಿ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ರಾಹುಲ್‍ಗಾಂಧಿ ಅವರನ್ನು ಐದು ದಿನಗಳ ಕಾಲ 50 ಗಂಟೆ ವಿಚಾರಣೆ ನಡೆಸಿ ಯಾವುದೇ ಸಾಕ್ಷ್ಯ ಒದಗದೆ ಕೈ ಚೆಲ್ಲಲಾಗಿದೆ.
ಈಗ ಸೋನಿಯಾಗಾಂಧಿ ಅವರಿಗೆ ನೋಟಿಸ್ ನೀಡಿ ಜು.21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸಂಸತ್ ಅವೇಶನ ನಡೆಯುವ ಸಂದರ್ಭದಲ್ಲಿ ಸಂಸದರಿಗೆ ನೋಟಿಸ್ ನೀಡಿರುವುದು ಅಕ್ಷಮ್ಯ ಎಂದರು.
ಕಾಂಗ್ರೆಸ್ ಜಾರಿ ನಿರ್ದೇಶನಾಲಯದ ಕ್ರಮವನ್ನು ವಿರೋಸಿ ಜು.21ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಮರು ದಿನ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ಹೇಳಿದರು.
ಎಲ್ಲಾ ಶಾಸಕರು, ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಅಂಗವಾಗಿ ಆ.1ರಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಭಾರತ್ ಜೋಡೋ ಪಾದಯಾತ್ರೆಗಳು ನಡೆಯಲಿವೆ. ಆ.15ರಂದು ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಮಂದಿ ಸಮಾವೇಶಗೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ದೇಶಕ್ಕಾಗಿ ನಡಿಗೆ ಎಂಬ ವಾಕಥಾನ್ ಆಯೋಜಿಸಲಾಗುವುದು ಎಂದರು.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತೀವ್ರವಾಗಿದೆ. ಬಿಜೆಪಿಯ ಮೂಲ ನಿವಾಸಿಗಳಿಗೆ ಸರ್ಕಾರದ ಬಗ್ಗೆ ಅಸಹನೆಯಿದೆ. ಜನತಾದಳದಿಂದ ವಲಸೆ ಬಂದವರು ಶೇ.30ರಷ್ಟು, ಕಾಂಗ್ರೆಸ್‍ನಿಂದ ವಲಸೆ ಬಂದವರು ಶೇ.30ರಷ್ಟು, ಬಿಜೆಪಿ ಶೇ.30ರಷ್ಟು ಜನ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ. ವಲಸೆ ಬಂದವರೇ ಸರ್ಕಾರದ ಅಪತ್ಯ ನಡೆಸಲು ಬಿಟ್ಟಿದೆ ಎಂಬ ಅಸಹನೆ ಮೂಲ ಬಿಜೆಪಿಗರಲ್ಲಿದೆ. ಹೀಗಾಗಿ ಒಳಗೊಳಗೆ ಕಿತ್ತಾಟಗಳು ಜೋರಾಗಿವೆ. ಹೈಕಮಾಂಡ್ ನಾಯಕರು ಪದೇ ಪದೇ ಬಂದು ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿಲ್ಲ. ಆರೋಪಿಗಳಿಂದ ಸೆಕ್ಷನ್ 164ರಡಿ ಹೇಳಿಕೆ ಕೊಡಿಸುತ್ತಿಲ್ಲ. ಭ್ರಷ್ಟರನ್ನು ರಕ್ಷಿಸಲಾಗುತ್ತಿದೆ. ಹಗರಣದ ಬಗ್ಗೆ ಆರೋಪ ಮಾಡಿದ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿತ್ತು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅದೇ ಪಕ್ಷದ ಎಚ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್‍ಗೆ ಸಿಐಡಿ ಏಕೆ ನೋಟಿಸ್ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಅಕ್ಕಿ, ಬೇಳೆ, ಗೋ ಮೇಲೆ ಜಿಎಸ್‍ಟಿ ವಿಸಿರುವ ಕುರಿತು ಶೀಘ್ರವೇ ಸಮಗ್ರ ಮಾಹಿತಿಯೊಂದಿಗೆ ಹೇಳಿಕೆ ನೀಡುವುದಾಗಿ ಇದೇ ವೇಳೆ ಅವರು ತಿಳಿಸಿದರು.