ರಾಜಭವನಕ್ಕೆ ಖುದ್ದು ಭೇಟಿ ಕೊಟ್ಟ ಸಚಿವರು, ಕಠಿಣ ನಿಯಮ ಜಾರಿಗೆ ಚರ್ಚೆ

ಬೆಂಗಳೂರು,ಏ.20-ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತಾಗಿ ಸಂಜೆ ನಡೆಯಲಿರುವ ಸರ್ವಪಕ್ಷಗಳ ಸಭೆ ಹಿನ್ನೆಲೆ, ರಾಜ್ಯಪಾಲರ ಜೊತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಮತ್ತು ಆರ್.ಅಶೋಕ್ ಚರ್ಚೆ ನಡೆಸಿದರು. ಉಭಯ ಸಚಿವರನ್ನು ರಾಜಭವನಕ್ಕೆ ಖುದ್ದು ರಾಜ್ಯಪಾಲ ವಜುಭಾಯಿ ವಾಲಾ ಅವರೇ ಆಹ್ವಾನಿಸಿ ರಾಜ್ಯದ ಸ್ಥಿತಿಗತಿ ಕುರಿತಂತೆ ಸಚಿವರಿಂದ ಮಾಹಿತಿ ಪಡೆದರು.

ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಬೊಮ್ಮಾಯಿ ಮತ್ತು ಅಶೋಕ್ ಜೊತೆ ಚರ್ಚೆ ನಡೆಸಿದ ರಾಜ್ಯಪಾಲರು, ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಂಜೆ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರ ಯಾವ ರೀತಿ ಮಾರ್ಗಸೂಚಿ ಹೊರಡಿಸಲಿದೆ ಹಾಗೂ ಅದರ ಅನುಷ್ಠಾನ ಸೇರಿದಂತೆ ಪ್ರತಿಯೊಂದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಲಾಕ್‍ಡೌನ್ ಜಾರಿ ಮಾಡಬೇಕೆ ಅಥವಾ ಈಗಿರುವ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯವಿದೆಯೇ? ಕಫ್ರ್ಯೂ ಸಮಯವನ್ನು ವಿಸ್ತರಣೆ ಮಾಡಬೇಕೆ? ಜನರು ಗುಂಪುಗೂಡುವುದನ್ನು ತಡೆಗಟ್ಟಲು 144 ಸೆಕ್ಷನ್ ಅನಿವಾರ್ಯವೇ ಎಂಬುದರ ಬಗ್ಗೆ ವಿವರಣೆ ಪಡೆದರು.

ದೆಹಲಿ, ರಾಜಸ್ಥನ, ಛತ್ತೀಸ್‍ಘಡ, ಮಹಾರಾಷ್ಟ್ರ ಮತ್ತಿತರ ಕಡೆ ಕೋವಿಡ್ ಸೋಂಕು ಹರಡವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿ ಮಾಡಿರುವುದರ ಬಗ್ಗೆಯೂ ರಾಜ್ಯಪಾಲರು ಮಾಹಿತಿಯನ್ನು ಪಡೆದುಕೊಂಡರು. ಒಂದು ವೇಳೆ ಬೆಂಗಳೂರಿನಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಂಡರೆ ಜನಸಾಮಾನ್ಯರಿಗೆ ಇದರಿಂದ ಉಂಟಾಗುವ ತೊಂದರೆ ಅದರಲ್ಲೂ ಬಡವರು, ಮಧ್ಯಮದವರು, ಕೂಲಿ ಕಾರ್ಮಿಕರು, ಶ್ರಮಿಕರಿಗೆ ಆಗಬಹುದಾದ ಅನಾಹುತಗಳ ಬಗ್ಗೆಯೂ ಚರ್ಚೆ ಮಾಡಿದರು.

ಲಾಕ್‍ಡೌನ್ ಜಾರಿ ಮಾಡುವ ಕುರಿತಾಗಿ ಮುಖ್ಯಮಂತ್ರಿಯವರ ಅಭಿಪ್ರಾಯ, ವಿರೋಧ ಪಕ್ಷಗಳ ಒಲವು, ಸಾರ್ವಜನಿಕರ ನಿಲುವು ಏನು? ಹಾಗೂ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಈವರೆಗೂ ತೆಗೆದುಕೊಂಡಿರುವ ಕ್ರಮಗಳೇನು? ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಕೋವಿಡ್ ಕೇಂದ್ರಗಳು, ಲಭ್ಯವಿರುವ ಲಸಿಕೆ, ಹಾಸಿಗೆ ವ್ಯವಸ್ಥೆ ಹೀಗೆ ಪ್ರತಿಯೊಂದರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈ ಮೀರುತ್ತಿದ್ದು, ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಸರ್ಕಾರ ಒತ್ತು ಕೊಡಬೇಕು, ಯಾರು ಕೂಡ ಚಿಕಿತ್ಸೆ ಇಲ್ಲದೆ ಸೋಂಕಿನಿಂದ ನರಳಿ ಸಾಯುವಂತಾಗಬಾರದು. ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಆದಷ್ಟು ಉತ್ತಮವಾದ ಚಿಕಿತ್ಸೆ ನೀಡಬೇಕೆಂದು ರಾಜ್ಯಪಾಲರು ಉಭಯ ಸಚಿವರಿಗೆ ಸಲಹೆ ಮಾಡಿದರು ಎಂದು ಗೊತ್ತಾಗಿದೆ.