ಬೆಂಗಳೂರು, ಜ.12- ಮನೆಗಳ್ಳತನ ಹಾಗೂ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಸಿ 9 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಸಿ ನಗರದ ಹೇಮಂತ್ (26) ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು.
ಇವರಿಂದ 48.6ಗ್ರಾಂ ಚಿನ್ನದ ಆಭರಣ, 6 ದ್ವಿಚಕ್ರ ವಾಹನಗಳು ಹಾಗೂ ಚಿನ್ನ ಮಾರಾಟ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಸ್ಯಾಂಟ್ರೋ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ವಶಪಡಿಸಿಕೊಂಡಿದ್ದಾರೆ. ಆರೋಪಿ ಹೇಮಂತ್ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಮನೆಗಳ ಡೋರ್ಲಾಕ್ ಒಡೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು. ಅಲ್ಲದೆ, ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದನು.
ಅ.8ರಂದು ಪಿರ್ಯಾದುದಾರರು ಕುಟುಂಬಸಮೇತ ಊರಿಗೆ ಹೋಗಿ ಅ.10ರಂದು ವಾಪಸ್ ಬಂದು ನೋಡಿದಾಗ ಅವರ ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿ ಚಿನ್ನದ ಒಡವೆಗಳು ಹಾಗೂ ನಗದು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ಶಿವಣ್ಣ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿ ಹೇಮಂತ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಬ್ಬ ಆರೋಪಿ ಮಂಜುನಾಥ್ ಹೆಸರು ಬಾಯ್ಬಿಟ್ಟಿದ್ದಾನೆ. ನ್ಯಾಯಾಂಗ ಬಂಧನದಲ್ಲಿದ್ದ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳವು ಮಾಲು ವಶಪಡಿಸಿಕೊಳ್ಳುವಲ್ಲಿ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನದಿಂದ ರಾಜರಾಜೇಶ್ವರಿನಗರ, ಜ್ಞಾನಭಾರತಿ, ಕೆಜಿ ನಗರ, ಸುಬ್ರಹ್ಮಣ್ಯಪುರ ಹಾಗೂ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದ ಕನ್ನಗಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾದಂತಾಗಿವೆ.
