ಗೆಲ್ಹೋಟ್ ಬೆಂಬಲಿಗರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಆಗ್ರಹ

Social Share

ಜೈಪುರ,ಅ.18-ರಾಜಸ್ತಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಮೇಲಾಟದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಬೆಂಬಲಿಗರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಸಭಾಧ್ಯಕ್ಷರನ್ನು ಆಗ್ರಹಿಸಿದೆ.

ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯ ಅವರ ನೇತೃತ್ವದ ನಿಯೋಗ ಇಂದು ವಿಧಾನಸಭಾಧ್ಯಕ್ಷರನ್ನು ಅವರ ಮನೆಯಲ್ಲಿ ಭೇಟಿ ನೀಡಿ ಮನವಿ ಮಾಡಿದೆ. ಅಶೋಕ್ ಗೆಲ್ಹೋಟ್ ಬೆಂಬಲಿಗರು ತಮ್ಮ ರಾಜೀನಾಮೆ ಪತ್ರಗಳನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆಯಾಚನೆ ಮಾಡಬೇಕು. ಇಲ್ಲದೇ ಹೋದರೆ ವಿಧಾನಸಭಾಧ್ಯಕ್ಷರು ಅಷ್ಟೂ ರಾಜೀನಾಮೆಗಳನ್ನು ಅಂಗೀಕರಿಸಬೇಕೆಂದು ಒತ್ತಡ ಹಾಕಿದ್ದಾರೆ.

ಹಲವು ಸಚಿವರು ಸೇರಿದಂತೆ 91ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಸೆ.25ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಬಹಿಷ್ಕರಿಸಿ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ದಾರಿವಾಲ ಅವರ ನಿವಾಸದಲ್ಲಿ ಪರ್ಯಾಯ ಸಭೆ ನಡೆಸಿದ್ದರು.

ಆ ವೇಳೆ ಅಶೋಕ್ ಗೆಲ್ಹೋಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅಷ್ಟೂ ಮಂದಿ ರಾಜೀನಾಮೆ ನೀಡಿದ್ದರು. ಈ ಪ್ರಹಸನ ನಡೆದು ಮೂರು ವಾರಕ್ಕೂ ಹೆಚ್ಚು ಸಮಯವಾಗಿದೆ. ರಾಜೀನಾಮೆ ಪತ್ರಗಳು ಸ್ಪೀಕರ್ ಅವರ ಪರಿಗಣನೆಯಲ್ಲಿದೆ ಎಂದು ಕಟಾರಿಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜೀನಾಮೆ ಪತ್ರಗಳನ್ನು ಶಾಸಕರು ಸ್ವಯಂಪ್ರೇರಿತವಾಗಿ ಕೊಟ್ಟಿದ್ದಾರೆ. ಹೀಗಾಗಿ ಅವರು ಸ್ವೀಕಾರ್ಹ. ಇಲ್ಲವಾದರೆ ಅಷ್ಟೂ ಮಂದಿ ಶಾಸಕರು ಸ್ಪೀಕರ್ ಅವರ ಮುಂದೆ ಖುದ್ದು ಹಾಜರಾಗಿ ಕ್ಷಮೆಯಾಚಿಸಿ ರಾಜೀನಾಮೆ ಹಿಂಪಡೆಯಲು ಒತ್ತಾಯಿಸುವುದಾಗಿ ತಿಳಿಸಿದರು.

ಕಳೆದ ತಿಂಗಳು ಅಶೋಕ್ ಗೆಲ್ಹೋಟ್ ಅವರನ್ನು ಎಐಸಿಸಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ರ್ಪಧಿಸುವಂತೆ ಹೈಕಮಾಂಡ್ ಸೂಚಿಸಿತ್ತು. ಕಾಂಗ್ರೆಸ್‍ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಸಿದ್ದಾಂತ ಇರುವುದರಿಂದ ಅಶೋಕ್ ಗೆಲ್ಹೋಟ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.

ತೆರವಾಗುವ ಸ್ಥಾನಕ್ಕೆ ಸಚಿನ್ ಪೈಲೆಟ್‍ರನ್ನು ನೇಮಿಸಲು ಮುಂದಾಗಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿದ್ದರು. ಸಾಮೂಹಿಕ ರಾಜೀನಾಮೆ ನೀಡಿದ್ದರು. ಮುಂದಿನ ಶಾಸಕಾಂಗ ನಾಯಕನ ಆಯ್ಕೆ ಪ್ರಕ್ರಿಯೆ ವೀಕ್ಷಣೆಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಕೇನ್ ಅವರ ನಿಯೋಗದ ಎದುರು ಶಾಸಕರು ಹಾಜರಾಗಲೇ ಇಲ್ಲ.

ಈ ಎಲ್ಲ ಬೆಳವಣಿಗೆ ಬಳಿಕ ಹೈಕಮಾಂಡ್ ಗೆಲ್ಹೋಟ್‍ರನ್ನು ಎಐಸಿಸಿ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿತು.

Articles You Might Like

Share This Article