ಜೈಪುರ, ಆ.19- ರಾಜಸ್ಥಾನದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‍ಫೋನ್ ನಿಡುವ ಸರ್ಕಾರದ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಜಾರಿಗೆ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆಸಕ್ತಿ ತೋರಿಸಿವೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬಯಸಿದ್ದು, ಚುರುಕಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳು ನಡೆದಿವೆ.
ತಾಂತ್ರಿಕ ಬಿಡ್‍ಗಳನ್ನು ಬುಧವಾರ ತೆರೆಯಲಾಗಿದೆ. ಉನ್ನತ ಮಟ್ಟದ ಸಮಿತಿಯು ಟೆಂಡರ್‍ಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರಣಿ ಹಬ್ಬಗಳು ಪ್ರಾರಂಭವಾಗುವ ಮುನ್ನವೇ ಮೊದಲ ಹಂತದ ಸ್ಮಾರ್ಟ್‍ಫೋನ್‍ಗಳ ವಿತರಣೆ ಶುರುವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ವರ್ಷದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆಯನ್ನು ಘೋಷಿಸಿದ್ದರು. ಚಿರಂಜೀವಿ ಆರೋಗ್ಯ ವಿಮಾ ಯೋಜನೆಯಲ್ಲಿ ದಾಖಲಾಗಿರುವ 1.35 ಕೋಟಿ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮೂರು ವರ್ಷಗಳವರೆಗೆ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‍ಫೋನ್‍ಗಳನ್ನು ನೀಡಲು ನಿರ್ಧರಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಕಂಪನಿಯಾದ ರಾಜ್‍ಕಾಂಪ್ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದೆ. ಈ ಯೋಜನೆಗೆ ಮೊಬೈಲ್ ಫೋನ್‍ಗಳು, ಮೂರು ವರ್ಷಗಳ ಇಂಟರ್ನೆಟ್ ಮತ್ತು ಇತರ ಸೇವೆಗಳ ವೆಚ್ಚ ಸೇರಿದಂತೆ ಸುಮಾರು 12,000 ಕೋಟಿ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಡಲಾಗುವ ಮೊಬೈಲ್‍ನಲ್ಲಿ ಎರಡು ಸಿಮ್‍ಗಳು ಇರಲಿವೆ, ಪ್ರಾಥಮಿಕ ಸ್ಪಾಟ್‍ನಲ್ಲಿ ಸಕ್ರಿಯಗೊಳ್ಳುವ ಒಂದು ಸಿಮ್ ಬದಲಾವಣೆಯಾಗುವುದಿಲ್ಲ, ಫಲಾನುಭವಿಗಳು ಎರಡನೇ ಸ್ಪಾಟ್‍ನಲ್ಲಿ ಮತ್ತೊಂದು ಸಿಮ್ ಬಳಕೆ ಮಾಡಬಹುದಾಗಿದೆ ಎಂದು ಯೋಜನೆಯ ಉಸ್ತುವಾರಿ ನಿರ್ವವಣೆ ಮಾಡುತ್ತಿರುವ ಛತ್ರಪಾಲ್ ಸಿಂಗ್ ತಿಳಿಸಿದ್ದಾರೆ.