ದಾಖಲೆ ನಿರ್ಮಿಸಿದ ರಜತ್‍ಗೆ ಪ್ರಶಸ್ತಿಗಳ ಸುರಿಮಳೆ

Spread the love

ಕೋಲ್ಕತ್ತಾ, ಮೇ 26- ತಮ್ಮ ರೋಚಕ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕ್ವಾಲಿಫೈಯರ್ 2 ಗೆ ತಲುಪಿಸಿದ ಯುವ ಆಟಗಾರ ರಜತ್ ಪತ್ತೆದಾರ್ ಅವರಿಗೆ ಪ್ರಶಂಸೆಗಳ ಜೊತೆಗೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ರಜತ್ ಪತ್ತೆದಾರ್ ಎಲಿಮಿನೇಟರ್ ಪಂದ್ಯದಲ್ಲಿ ಶತಕ (112* ರನ್, 12 ಬೌಂಡರಿ, 7 ಸಿಕ್ಸರ್) ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಲಕ್ನೋ ಬೌಲರ್‍ಗಳನ್ನು ಎಸೆದ ಚೆಂಡನ್ನು ಬೌಂಡರಿಗಳ ಗೆರೆ ಮುಟ್ಟಿಸುವ ಮೂಲಕ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿಯೂ ಹೊರಹೊಮ್ಮಿದ್ದಾರೆ. ಆರ್‍ಸಿಬಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಪಾಫ್‍ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‍ವೆಲ್‍ರ ಬ್ಯಾಟಿಂಗ್ ಅನ್ನೆ ಮರೆಮಾಚುವಂತೆ ಬ್ಯಾಟ್ ಬೀಸಿದ ರಜತ್ ಪಂದ್ಯ ಪುರುಷೋತ್ತಮ ರಾಗುವ ಮೂಲಕ 5 ಲಕ್ಷ ರೂ.ಗಳನ್ನು ಗಳಿಸಿದರೆ, ಪಂದ್ಯದಲ್ಲಿ 12 ಬೌಂಡರಿಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಬೌಂಡರಿ ಗಳಿಸಿದ ಆಟಗಾರನಿಗೆ ನೀಡುವ 1 ಲಕ್ಷ ನಗದು, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದಕ್ಕಾಗಿ ( 7 ಸಿಕ್ಸ್), 1 ಲಕ್ಷ, ಮೋಸ್ಟ್ ವ್ಯಾಲುಯೆಬೆಲ್ ಆಟಗಾರನ ರೂಪದಲ್ಲಿ 1 ಲಕ್ಷ, ಗೇಮ್ ಚೇಂಜರ್ ರೂಪದಲ್ಲಿ 1 ಲಕ್ಷ, ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ರೂಪದಲ್ಲಿ 1 ಲಕ್ಷ ಹೀಗೆ ಒಟ್ಟು 10 ಲಕ್ಷ ರೂ.ಗಳನ್ನು ರಜತ್ ಪತ್ತೆದಾರ್ ಅವರು ಗಳಿಸಿದ್ದಾರೆ.

ವೇಗದ ಶತಕ:
49 ಎಸೆತಗಳಲ್ಲೇ ಶತಕ ಗಳಿಸುವ ಮೂಲಕ ಐಪಿಎಲ್ ಪ್ಲೇಆಫ್‍ನಲ್ಲಿ ಅತಿ ವೇಗದ ಶತಕ ಗಳಿಸಿದ ಆಟಗಾರನಾಗಿಯೂ ಗುರುತಿಸಿಕೊಂಡ ರಜತ್ ಎಲಿಮಿನೇಟರ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್‍ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ಆರಂಭಿಕ ಆಟಗಾರ ಮುರಳಿ ವಿಜಯ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 2012ರಲ್ಲಿ 113 ರನ್ ಗಳಿಸಿದ್ದರೆ, 2014ರಲ್ಲಿ ಕಿಂಗ್ಸ್ ಪಂಜಾಬ್‍ನ ಆಟಗಾರ ವೀರೇಂದ್ರ ಸೆಹ್ವಾಗ್ ಸಿಎಸ್‍ಕೆ ವಿರುದ್ಧ 122 ರನ್ ಗಳಿಸಿದ್ದಾರೆ.

2014ರ ಐಪಿಎಲ್ ಫೈನಲ್‍ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್‍ನ ವೃದ್ಧಿಮಾನ್ ಸಾಹ ಕೆಕೆಆರ್ ವಿರುದ್ಧ ಅಜೇಯ 115 ರನ್ ಗಳಿಸಿದ್ದರೆ, 2018ರ ಫೈನಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ಆಟಗಾರ ಶೇನ್ ವಾಟ್ಸನ್ ಎಸ್‍ಆರ್‍ಎಚ್ ವಿರುದ್ಧ ಅಜೇಯ 117 ರನ್ ಗಳಿಸಿದ್ದಾರೆ.

ನಾಳೆ ಆರ್‍ಸಿಬಿ ತಂಡವು ಕ್ವಾಲಿಫೈಯರ್ 2 ಪಂದ್ಯದಲ್ಲಿ ಆರ್ ಆರ್ ತಂಡವನ್ನು ಎದುರಿಸಲಿದ್ದು ರಜತ್ ಅಲ್ಲೂ ದಾಖಲೆ ನಿರ್ಮಿಸಲಿ.

Facebook Comments