ಬೆಂಗಳೂರು, ಜ.25- ಕೋವಿಡ್ ಡ್ಯೂಟಿಯನ್ನು ಕಡ್ಡಾಯವಾಗಿ ಮಾಡಬೇಕು, ಇನ್ನೊಂದೆಡೆ ಪರೀಕ್ಷೆಗೂ ಸಿದ್ಧರಾಗಬೇಕು ಎಂಬ ಒತ್ತಡ ಹೇರುವ ಮೂಲಕ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಗಳಿಗೆ ಕಿರುಕುಳ ನೀಡುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ.
ವಿಶ್ವವಿದ್ಯಾಲಯದ ಸರ್ವಾಧಿಕಾರಿ ಧೋರಣೆ ಮತ್ತು ಅಮಾನವೀಯ ನಡವಳಿಕೆಯಿಂದ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಹುದ್ದ ಮೇಲಿನ ಹಗ್ಗ ಜಗ್ಗಾಟದ ಜಂಜಟಗಳ ಸಿಟ್ಟನ್ನು ಅಕಾರಿಗಳು ವಿದ್ಯಾರ್ಥಿಗಳ ಮೇಲೆ ತೀರಿಸಿ ಕೊಳ್ಳುತ್ತಿದ್ಧಾರೆ ಎಂಬ ಟೀಕೆಗಳು ಕೇಳಿ ಬಂದಿವೆ.
ವೈದ್ಯಕೀಯ ಶಿಕ್ಷಣ ಕೋರ್ಸ್‍ನ ಅಂತಿಮ ವರ್ಷಕ್ಕೆ ಫೆಬ್ರವರಿ 22ರಿಂದ ಮಾರ್ಚ್ 9ರವರೆಗೆ ಪರೀಕ್ಷೆ ನಡೆಸಲು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ದಿನಾಂಕ ಘೋಷಣೆ ಮಾಡಿದೆ. ಮಾರ್ಚ್ 14 ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು ಶುರುವಾಗಲಿವೆ.
ಇದೇ ಕೋರ್ಸ್‍ಗೆ ಕಳೆದ ವರ್ಷ ಮಾರ್ಚ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ 2021ರ ಮೇ ನಲ್ಲಿ ತರಗತಿಗಳನ್ನು ಆರಂಭಿಸಲಾಯಿತು. ಮೂರು ತಿಂಗಳು ಆನ್‍ಲೈನ್ ತರಗತಿ ನಡೆಸಿ, ಆಗಸ್ಟ್ ನಿಂದ ಭೌತಿಕ ತರಗತಿಗಳನ್ನು ಶುರು ಮಾಡಲಾಗಿದೆ. ಸರಿಯಾಗಿ ಎಂಟು ತಿಂಗಳು ತರಗತಿಗಳು ನಡೆದಿಲ್ಲ.
ವೈದ್ಯಕೀಯ ಪರೀಕ್ಷೆಗೆ ತಯಾರಾಗಲು ಸಮಯಾವಕಾಶ ಬಹಳ ಕಡಿಮೆ ಸಿಕ್ಕಿದೆ. ಹೀಗಾಗಿ ನಾಲ್ಕು ವಾರಗಳ ಕಾಲ ಪರೀಕ್ಷೆಯನ್ನು ಮುಂದೂಡಿ ಎಂದು ಒತ್ತಾಯಿಸಿ ವೈದ್ಯಕೀಯ ವಿದ್ಯಾರ್ಥಿಗಳು ಇಂದು ವಿಶ್ವವಿದ್ಯಾಲಯದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಎರಡನೇ ಅಲೆಯಲ್ಲೂ ವಿದ್ಯಾರ್ಥಿಗಳು ಟೆಲಿಡ್ಯೂಟಿ ಮಾಡಿದ್ದರು. ಮೂರನೇ ಅಲೆಯಲ್ಲೂ ಬಿಬಿಎಂಪಿ ಟೆಲಿಡ್ಯೂಟಿಗೆ ನಿಯೋಜನೆ ಮಾಡಿದೆ. ಸೋಂಕಿತರ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ಅವರಿಗೆ ಮನೆಯಲ್ಲಿ ಅನುಸರಿಸ ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿದ್ಯಾರ್ಥಿಗಳು ಸಲಹೆ ನೀಡಲಿದ್ದಾರೆ.
ಸೋಂಕಿತರು ಮನೆಯಲ್ಲೇ ಇರಬೇಕೆ ಅಥವಾ ಆಸ್ಪತ್ರೆಗೆ ದಾಖಲಾಗಬೇಕೆ ಎಂಬ ಬಗ್ಗೆಯೂ ತೀರ್ಮಾನಿಸಲಿದ್ದಾರೆ. ಈ ಹಿಂದೆ ಕೋವಿಡ್ ಡ್ಯೂಟಿ ಮಾಡಿದ್ದ ಕಾರಣಕ್ಕೆ ಕಳೆದ ವರ್ಷ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು.
ಈ ಬಾರಿ ಮೂರನೆ ಅಲೆ ಹೆಚ್ಚಾದ ವೇಳೆಯೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಡ್ಯೂಟಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಒಂದೆಡೆ ಪರೀಕ್ಷೆಗೆ ತಯಾರಾಗಬೇಕು, ಮತ್ತೊಂದೆಡೆ ಕೋವಿಡ್ ಡ್ಯೂಟಿಯನ್ನು ಮಾಡಬೇಕು ಎಂಬ ಅನಿವಾರ್ಯತೆಯಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕಿದ್ದಾರೆ.
ಪರೀಕ್ಷೆ ಹಿನ್ನೆಲೆಯಲ್ಲಿ ಕೋವಿಡ್ ಡ್ಯೂಟಿ ನಿರ್ವಹಿಸಲು ಹಿಂದೇಟು ಹಾಕುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಅಕಾರಿಗಳು ಮೆಸೇಜ್ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ. ಕೋವಿಡ್ ಡ್ಯೂಟಿ ಮಾಡದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ನೀಡುವುದಿಲ್ಲ, ಮುಂದಿನ ದಿನಗಳಲ್ಲಿ ಸಂಕಷ್ಟ ಅನುಭವಿಸ ಬೇಕಾಗುತ್ತದೆ ಎಂದು ಬ್ಲಾಕ್ ಮೇಲ್ ಮಾಡಲಾಗುತ್ತಿದೆ.
ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳ ಕಾಲ ಮುಂದೂಡಿ ಎಂದರು ವಿಶ್ವವಿದ್ಯಾಲಯ ಒಪ್ಪುತ್ತಿಲ್ಲ. ಕೋವಿಡ್ ಡ್ಯೂಟಿ ಮಾಡಲು ಶುರು ಮಾಡಿದರೆ, ಓದಲು ಸಮಯ ಸಿಗುವುದಿಲ್ಲ. ಈ ಒತ್ತಡದಿಂದ ಸಾಕಷ್ಟು ವಿದ್ಯಾರ್ಥಿಗಳು ಖಿನ್ನತೆಗೆ ಜÁರಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದ್ದಾರೆ.
ಕುಲಪತಿ ಹುದ್ದಾಯ ಹಗ್ಗ ಜಟ್ಟಾಟದಲ್ಲಾದ ಹಿನ್ನೆಡೆಯ ಸಿಟ್ಟನ್ನು ವಿಶ್ವವಿದ್ಯಾಲಯದ ಪ್ರಮುಖರು ವಿದ್ಯಾರ್ಥಿಗಳ ಮೇಲೆ ತೀರಿಸಿ ಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಫೆಬ್ರವರಿಯಲ್ಲಾ ಪರೀಕ್ಷೆ ನಡೆದರೆ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ ಎಂದು ಹಂಗಾಮಿ ಉಪ ಕುಲಪತಿಗಳು ಒಪ್ಪಿಕೊಳ್ಳುತ್ತಾರೆ, ವಿದ್ಯಾರ್ಥಿಗಳು ಕೋವಿಡ್ ಡ್ಯೂಟಿ ಮಾಡಿರುವುದರಿಂದ ಅವರಿಗೆ ತಕ್ಷಣವೇ ಪರೀಕ್ಷೆಗೆ ಸಿದ್ದಗೊಳ್ಳುವುದು ಕಷ್ಟವಾಗಲಿದೆ. ಪರೀಕ್ಷೆ ಮುಂದೂಡುವಂತೆ ಕುಲಸಚಿವರಿಗೆ ಸೂಚಿಸುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಆದರೂ ಫೆಬ್ರವರಿಯಲ್ಲೇ ಪರೀಕ್ಷೆ ನಡೆಸಲು ಎಲ್ಲಾ ತಯಾರಿಗಳು ನಡೆಯುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಇಂದು ವಿಶ್ವವಿದ್ಯಾಲಯದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ ನಮ್ಮ ವಿರೋಧವನ್ನು ದಾಖಲಿಸಿದ್ದೇವೆ. ವಿಶ್ವವಿದ್ಯಾಲಯ ನಮ್ಮ ಬೇಡಿಕೆಯನ್ನು ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ವಿಶ್ವವಿದ್ಯಾಲಯ ತಕ್ಷಣವೇ ನಿಲ್ಲಿಸಬೇಕು ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.
