ರಾಜ್ಯಸಭೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ, ಇನ್ನೂ ಫೈನಲ್ ಆಗಿಲ್ಲ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಮೇ 23- ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ನಾಳೆ ಅಸೂಚನೆ ಹೊರ ಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದರೂ ರಾಜಕೀಯ ಪಕ್ಷಗಳು ಕಣಕ್ಕಿಳಿಸಲಿರುವ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

ಆಡಳಿತಾರೂಢ ಬಿಜೆಪಿ ಎರಡು, ಪ್ರತಿಪಕ್ಷ ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಜೆಡಿಎಸ್ ಒಂದು ಸ್ಥಾನ ಗೆಲ್ಲಬೇಕಾದರೆ ರಾಷ್ಟ್ರೀಯ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ. ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ನಾಳೆಯಿಂದ ಮೇ 31ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ.

ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾದ ಕೆ.ಸಿ.ರಾಮಮೂರ್ತಿ, ನಿರ್ಮಲಾಸೀತಾರಮನ್ ಅವರನ್ನು ಮತ್ತೆ ಈ ಬಾರಿ ಸ್ಪರ್ಧೆಗಿಳಿಸುವ ಸಾಧ್ಯತೆಗಳಿವೆ ಇದೆ ಹೇಳಲಾಗುತ್ತಿದೆ. ಆದರೆ, ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಅವರು ಈ ಬಾರಿ ಕರ್ನಾಟಕ ಬದಲಿಗೆ ಉತ್ತರ ಪ್ರದೇಶದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಗೊಂದು ವೇಳೆ ಉತ್ತರ ಪ್ರದೇಶದಿಂದ ನಿರ್ಮಲಾಸೀತಾರಮನ್ ಸ್ರ್ಪಸಿದರೆ ರಾಜ್ಯದಿಂದ ಹೊಸಬರಿಗೆ ಅವಕಾಶ ಮಾಡಿಕೊಡಲು ಬಿಜೆಪಿ ಉದ್ದೇಶಿಸಿದೆ. ನಿರ್ಮಲ್‍ಕುಮಾರ್ ಸುರಾನ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದರೂ ಅಕೃತವಾಗಿ ಇನ್ನೂ ಯಾರ ಹೆಸರೂ ಪ್ರಕಟವಾಗಿಲ್ಲ.

ಪ್ರತಿ ಪಕ್ಷ ಕಾಂಗ್ರೆಸ್‍ನಿಂದ ಹಾಲಿ ರಾಜ್ಯಸಭೆ ಸದಸ್ಯರಾಗಿರುವ ಜಯರಾಮ್ ರಮೇಶ್ ಅವರನ್ನೇ ಮತ್ತೆ ರಾಜ್ಯದಿಂದ ಸ್ಪರ್ಧೆಗಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಜೆಡಿಎಸ್‍ನಿಂದ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಹೆಸರು ಪ್ರಸ್ತಾಪವಾಗುತ್ತಿದ್ದು, ಇನ್ನೂ ಅಂತಿಮವಾಗಿಲ್ಲ.

ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿರುವುದರಿಂದ ಈ ಮೂರು ರಾಜಕೀಯ ಪಕ್ಷಗಳು ವಿಧಾನಪರಿಷತ್ ಆಯ್ಕೆ ಕಡೆ ಹೆಚ್ಚು ಗಮನ ಹರಿಸಿವೆ. ಆನಂತರ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಿವೆ.