ಜನಸಾಮಾನ್ಯರ ಪರ ಸಂಸತ್ತಿನಲ್ಲಿ ಧ್ವನಿಯೆತ್ತುವೆ : ವೀರೇಂದ್ರ ಹೆಗ್ಗಡೆ

Social Share

ಬೆಳ್ತಂಗಡಿ, ಅ.12- ತಾಲೂಕು ಹಾಗೂ ರಾಜ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ತಮ್ಮ ಯೋಚನೆ ಹಾಗೂ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ವಸಂತಮಹಲ್ ಬಳಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಕರು ಹಾಗೂ ಅಡಿಕೆ ಬೆಳೆಗಾರರು ಅನೇಕ ಸಮಸ್ಯೆಗಳಿಂದ ಹತಾಶರಾಗಿದ್ದಾರೆ. ಅವರ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತುವುದಲ್ಲದೆ, ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ಏಳು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಈಗಾಗಲೆ ಪ್ರಾರಂಭಿಸಿದ್ದು, ಜನಸಾಮಾನ್ಯರಿಗೆ ಆಧಾರ್ ಕಾರ್ಡ್, ಆರೋಗ್ಯ ವಿಮೆ, ನೆರೆ-ಬರ ಪರಿಹಾರ, ಕೂಲಿ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ , ಆಯುಷ್ಮಾನ್ ಕಾರ್ಡ್ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗಿದೆ.

ಧರ್ಮಸ್ಥಳದ ಮಂಜುನಾಥನ ಬಗ್ಗೆ ದೃಢ ನಂಬಿಕೆ ಎಲ್ಲರಲ್ಲಿದೆ. ದೇವಸ್ಥಾನದಲ್ಲಿ ಧಾರ್ಮಿಕ ಪರಂಪರೆ, ಶಿಸ್ತು, ಸ್ವಚ್ಛತೆ, ಸಂಪ್ರದಾಯ ಹಾಗೂ ಕಾಲ ಕಾಲಕ್ಕೆ ನಡೆಯಬೇಕಾದ ಕಟ್ಟುಕಟ್ಟಳೆಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ.

ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನದ ಅಳವಡಿಕೆ ಹಾಗೂ ಮಹಿಳಾ ಸಬಲೀಕರಣ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಿಶೇಷ ಒತ್ತು ನೀಡಿದ್ದು ಇದು ಯಶಸ್ವಿಯಾಗಿದೆ. ರಾಜ್ಯಸಭಾ ಸದಸ್ಯನಾದರೂ ತನ್ನ ಆಹಾರ-ವಿಹಾರ, ಆಚಾರ -ವಿಚಾರ, ಧರಿಸುವ ಧಿರಿಸು, ಶಿಷ್ಟಾಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ರಾಜ್ಯ ಸಭೆ ಹಿರಿಯ ಹಾಗೂ ಅನುಭವಿ ಸದಸ್ಯರ ವೇದಿಕೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರೆ ಹೆಗ್ಗಡೆಯವರ ಸೇವೆ, ಸಾಧನೆ ಮತ್ತು ವರ್ಚಸ್ಸನ್ನು ಗಮನಿಸಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ.

ಸಾಮಾನ್ಯವಾಗಿ ಸಂಸದರ ಕಾರ್ಯಾಲಯ ಜಿಲ್ಲಾ ಕೇಂದ್ರದಲ್ಲಿಯೂ, ಶಾಸಕರ ಕಾರ್ಯಾಲಯ ತಾಲೂಕು ಕೇಂದ್ರದಲ್ಲಿಯೂ ಇರುತ್ತದೆ. ಆದರೆ, ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಕಾರ್ಯಾಲಯ ಆರಂಭವಾಗಿರುವುದು ದೇಶದಲ್ಲೇ ಇದು ಪ್ರಥಮ ಹಾಗೂ ಐತಿಹಾಸಿಕ ಘಟನೆಯಾಗಿದೆ. ಇದುವೆ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂದು ಬಣ್ಣಿಸಿದರು.

ಒಬ್ಬರು ರಾಜ್ಯಸಭಾ ಸದಸ್ಯರು, ಮೂರು ಮಂದಿ ಶಾಸಕರು ಹಾಗೂ ಅತಿ ಹೆಚ್ಚು ಅಂದರೆ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕು ಸರ್ವ ರೀತಿಯಿಂದಲೂ ವಿಶಿಷ್ಟವಾಗಿದೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದ್ರೆ, ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಕಾರ್ಯ ನಿರ್ವಹಣಾಕಾರಿ ಎಂ.ವೈ. ಹರೀಶ್, ಪೂರಣವರ್ಮ ಸಂಸದರ ಆಪ್ತಕಾರ್ಯದರ್ಶಿ ಕೆ.ಎನ್. ಜನಾರ್ದನ್ ಗ್ರಾಮಾಭಿವೃದ್ಧಿ ಯೋಜನೆಯ ಶಿವಕುಮಾರ್ ಮತ್ತು ಸುಷ್ಮಾ ಉಪಸ್ಥಿತರಿದ್ದರು.

Articles You Might Like

Share This Article