ದಾವಣಗೆರೆ, ಸೆ.20- ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಚಾರಿ (68) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮುಂಜಾನೆ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದಲ್ಲಿರುವ ಅವರ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರಿಗೆ ಅಕ್ಕಿ ವಿತರಿಸದೆ ನ್ಯಾಯಬೆಲೆ ಅಂಗಡಿಯವರು ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿ ಕಳೆದ ಹಲವು ದಿನಗಳಿಂದ ವೀರಾಚಾರಿ ಹೋರಾಟ ನಡೆಸಿದ್ದರು. ಇದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿತ್ತು. ಇತ್ತೀಚೆಗೆ ಅವರು ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇದನ್ನೂ ಓದಿ : ಮೆಕ್ಸಿಕೋದಲ್ಲಿ ಭಾರೀ ಭೂಕಂಪ..!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಮನನೊಂದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದರಿಂದಾಗಿ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವೀರಾಚಾರಿ ಸಾವಿನ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಪಡೆಗಳನ್ನು ಕರೆಸಿಕೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ.