ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಶ್ರೀಗಳ ಕರೆ

Ashok-2
ಬೆಂಗಳೂರು, ಜೂ.30- ಬಡವನಾಗಿ ಹುಟ್ಟುವುದು ಶಾಪವಲ್ಲ, ಆದರೆ ಬಡವನಾಗಿ ಸಾಯೋದು ಶಾಪ… ಹಾಗಾಗಿ ವಿದ್ಯಾರ್ಥಿಗಳು ತಮಗೆ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಪಟ್ಟಾಭಿರಾಮನಗರ ವಾರ್ಡ್‍ನಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಂಟನೆ ವರ್ಷದ ಒಂದು ಲಕ್ಷ ನೋಟ್‍ಬುಕ್ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಿಸಿ ಅವರು ಮಾತನಾಡಿದರು. ವಿದ್ಯೆಗೆ ಬಡತನ ಅಡ್ಡಿ ಆಗುವುದಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಒಪ್ಪತ್ತು ಊಟವೂ ಇರಲಿಲ್ಲ. ಆದರೂ ಅವರು ಛಲದಿಂದ ವಿದ್ಯಾಭ್ಯಾಸ ಮಾಡಿ ಮಹಾನ್ ವಿಜ್ಞಾನಿಯಾದರು, ರಾಷ್ಟ್ರಪತಿಗಳಾಗಿ ಆಡಳಿತ ನಡೆಸಿದರು. ಅಂತಹವರ ಜೀವನದ ಮೌಲ್ಯಗಳನ್ನು ನೀವೆಲ್ಲ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬೆಂಗಳೂರು ಆಧ್ಯಾತ್ಮಿಕ ಹಾಗೂ ಆಧುನಿಕತೆಗೆ ಶ್ರೇಷ್ಠತೆ ಪಡೆದಿದೆ. ಇದನ್ನು ಮುಂದುವರಿಸುವಲ್ಲಿ ರಕ್ಷಾ ಫೌಂಡೇಷನ್ ಶ್ರಮಿಸುತ್ತಿದೆ. ಈ ಫೌಂಡೇಷನ್ ನೀಡುತ್ತಿರುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನುಡಿದರು. ನಮ್ಮ ದೇಶದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಕೂಡ ಭಾರತದ ಮಕ್ಕಳ ಬುದ್ಧಿಮತ್ತೆಯನ್ನು ಮೆಚ್ಚಿಕೊಂಡಿದ್ದರು. ಶಾಲಾ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಬುದ್ಧಿಮತ್ತೆ ಬೆಳೆಸಿಕೊಂಡು ದೇಶದ ಕೀರ್ತಿಪತಾಕೆಯನ್ನು ವಿದೇಶಗಳಲ್ಲೂ ಹಾರಿಸಬೇಕು ಎಂದು ಶ್ರೀಗಳು ಹಿತವಚನ ನುಡಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಚುನಾವಣೆಗಳಲ್ಲಿ ಸಹಾಯ ಮಾಡುವುದು ದೊಡ್ಡದಲ್ಲ, ಮಕ್ಕಳ ವ್ಯಾಸಂಗಕ್ಕೆ ನೆರವಾಗುವುದು ಮಹತ್ಕಾರ್ಯ. ಇಂತಹ ಸಮಾಜಮುಖಿ ಕಾರ್ಯವನ್ನು ರಕ್ಷಾ ಫೌಂಡೇಷನ್ ಮುಂದುವರಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ನಗರದಲ್ಲೊಬ್ಬಳು ತಾಯಿ ಭಿಕ್ಷುಕಿಯಾಗಿದ್ದಾಳೆ. ಆದರೆ, ಆಕೆಯ ಮಗಳು ಚೆನ್ನಾಗಿ ಓದಿ ಈಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದಾಳೆ. ಆಕೆ ನಿಜಕ್ಕೂ ಎಲ್ಲರಿಗೂ ಮಾದರಿ. ನೀವು ಕೂಡ ಆ ಹುಡುಗಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದೇ ವೇಳೆ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಅನಂತ್‍ಕುಮಾರ್, ಬೆಂಗಳೂರು ಕಟ್ಟಿದವರು ಯಾರು, ಬೆಂಗಳೂರು ಅಭಿವೃದ್ಧಿಗೆ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರು.

ದೇಶಕ್ಕಾಗಿ ಎಲ್ಲರೂ ದುಡಿಯಬೇಕು. ಈ ನಿಟ್ಟಿನಲ್ಲಿ ಮಕ್ಕಳಾದ ನೀವೆಲ್ಲ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ರಕ್ಷಾ ಫೌಂಡೇಷನ್ ಸಂಸ್ಥಾಪಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಎಂಟು ವರ್ಷದ ಹಿಂದೆ ಫೌಂಡೇಷನ್ ಪ್ರಾರಂಭಿಸಿದೆವು. ಅಂದಿನಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೋಟ್ ಪುಸ್ತಕ ಮತ್ತಿತರ ಸಲಕರಣೆ ನೀಡುತ್ತಾ ಬಂದಿದ್ದೇವೆ. ಮುಂದೆಯೂ ಈ ಸಮಾಜಮುಖಿ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್, ಐ-ಪಾಡ್, ವಿಕಲಚೇತನ ಮಕ್ಕಳಿಗೆ ದ್ವಿಚಕ್ರ ವಾಹನ ಮತ್ತಿತರ ಸವಲತ್ತನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಧೃವಸರ್ಜಾ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಬಿಬಿಎಂಪಿ ಸದಸ್ಯರಾದ ನಾಗರತ್ನಮ್ಮ ರಾಮಮೂರ್ತಿ, ಲಕ್ಷ್ಮಿ ನಟರಾಜ್ ಮತ್ತಿತರ ಸದಸ್ಯರು, ಗಣ್ಯರು ಹಾಜರಿದ್ದರು.

Sri Raghav

Admin