ನವದೆಹಲಿ, ಜು.23- ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸನ್ಮಾನಿಸುವ ಮೂಲಕ ಸಂಸದರು ಇಂದು ಸಂಜೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಡೆಯಲಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದರು ಭಾಗವಹಿಸಲಿದ್ದಾರೆ.
ಸಂಸದರ ಪರವಾಗಿ ಬಿರ್ಲಾ ಅವರು ಕೋವಿಂದ್ ಅವರನ್ನು ಸನ್ಮಾನಿಸಲಿದ್ದಾರೆ. ನಿರ್ಗಮಿತ ರಾಷ್ಟ್ರಪತಿಗಳಿಗೆ ಸಂಸದರು ಸಹಿ ಮಾಡಿದ ಸ್ಮರಣಿಕೆ ಮತ್ತು ಸಹಿ ಪುಸ್ತಕವನ್ನು ಸಹ ನೀಡಲಾಗುವುದು.
ನೂತನವಾಗಿ ಚುನಾಯಿತರಾಗಿರುವ ದ್ರೌಪದಿ ಮುರ್ಮು ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ. ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಂದ್ ಅವರ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಕೇಂದ್ರ ಸಚಿವ ಸಂಪುಟದ ಸದಸ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅನೇಕ ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಬುಡಕಟ್ಟು ನಾಯಕರು ಸೇರಿದಂತೆ ದೇಶದ ಎಲ್ಲಾ ಭಾಗಗಳಿಂದ ಔತಣಕೂಟದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.