ಕುಮಾರಸ್ವಾಮಿಯವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ : ರಾಮಲಿಂಗಾರೆಡ್ಡಿ

Ramalingareddy--02
ಬೆಂಗಳೂರು, ಜೂ.4- ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿರಲು ಕಾಂಗ್ರೆಸ್ ಬೆಂಬಲ ನಿರಂತರವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣಾ ತಯಾರಿ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ನಂತರ ರಾಮಲಿಂಗಾರೆಡ್ಡಿ ಸುದ್ದಿಗಾರರ ಜತೆ ಮಾತನಾಡಿದರು.

ನಾನು ಎಷ್ಟು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮಾತಿನ ನಡುವೆ ಸಹಜವಾಗಿ ಅವರು ಆ ರೀತಿ ಹೇಳಿರಬಹುದು. ಅವರಿಗೆ ಐದು ವರ್ಷ ನಾವು ಬೆಂಬಲ ಕೊಡುತ್ತೇವೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ. ಸುಭದ್ರ ಸರ್ಕಾರವಾಗಿರಬೇಕು ಎಂಬುದು ನಮ್ಮ ಬಯಕೆ. ಈ ವಿಷಯದಲ್ಲಿ ಅನುಮಾನ ಬೇಡ ಎಂದು ಹೇಳಿದರು.
ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಸಿಗುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವೊತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಸಚಿವ ಸಂಪುಟದಲ್ಲಿ ಹಿರಿಯರಿರಬೇಕೋ ಅಥವಾ ಕಿರಿಯರು ಇರಬೇಕೋ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಅದೃಷ್ಟ ಎಲ್ಲಿಯವರೆಗೂ ಚೆನ್ನಾಗಿರುತ್ತದೋ ಅಲ್ಲಿಯವರೆಗೂ ಅವಕಾಶಗಳಿರುತ್ತವೆ ಎಂದರು.

Sri Raghav

Admin