‘ನಾನು ಕಾಂಗ್ರೆಸ್‌ನಲ್ಲೇ ಇರ್ತೀನಿ, ನಾಳೆ ಸದನಕ್ಕೆ ಹಾಜರಾಗ್ತೀನಿ’ : ರಾಮಲಿಂಗಾರೆಡ್ಡಿ

ಬೆಂಗಳೂರು, ಜು.17-ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ, ನಾಳೆ ಸದನಕ್ಕೆ ಹಾಜರಾಗುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲ ಕಾರಣಗಳಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಹಿಂಪಡೆಯುವುದು ಅಥವಾ ಪಡೆಯದಿರುವ ಬಗ್ಗೆ ಸ್ಪೀಕರ್ ಕರೆದಿರುವ ವಿಚಾರಣೆ ವೇಳೆ ಸ್ಪಷ್ಟವಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ.

ರಾಜಕಾರಣವನ್ನು ಬಹಿರಂಗವಾಗಿ ಚರ್ಚಿಸುವುದಿಲ್ಲ ಈಗಾಗಲೇ ತಿಳಿಸಿದ್ದೇನೆ ಎಂದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್ ಪಕ್ಷದ ಬಗ್ಗೆಯಾಗಲಿ, ಸಮ್ಮಿಶ್ರ ಸರ್ಕಾರದ ವಿರುದ್ಧವಾಗಲಿ ವ್ಯತಿರಿಕ್ತ ಹೇಳಿಕೆ ನೀಡಿಲ್ಲ ಎಂದು ಹೇಳಿದರು.

# ಸುಪ್ರೀಂ ತೀರ್ಪಿಗೆ ಸ್ವಾಗತ – ಕೋಟಾ ಶ್ರೀನಿವಾಸಪೂಜಾರಿ :
ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ನಾಳೆ ಸರ್ಕಾರ ಸಹಜವಾಗಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿಶ್ವಾಸಮತ ಗೆದ್ದು ಅಧಿಕಾರ ಹಿಡಿಯಲಿದೆ. ಕೆಲವು ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದು ಸರಿಯಲ್ಲ ಎಂದರು.

ಸುಪ್ರೀಂಕೋರ್ಟ್ ಆದೇಶದಲ್ಲಿ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದಿದೆ. ಆದರೂ ಮೈತ್ರಿ ಪಕ್ಷದವರು ಇಂತಹ ಕೆಲಸಕ್ಕೆ ಮುಂದಾದರೆ ಅವರಿಗೆ ಅದು ಶೋಭೆ ತರುವುದಿಲ್ಲ. ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.

Sri Raghav

Admin