2013ರಲ್ಲಿ ಆದಂತೆ ಬಿಜೆಪಿ ಮತ್ತೆ ಇಬ್ಭಾಗವಾಗಲಿದೆ : ರಾಮಲಿಂಗಾರೆಡ್ಡಿ ಭವಿಷ್ಯ

Spread the love

ಬೆಂಗಳೂರು, ನ.30- ಒಳ ಜಗಳದಿಂದಾಗಿ ಬಿಜೆಪಿ 2013ರಲ್ಲಿ ಹೊಡೆದು ಹೋಳಾದಂತೆ ಮುಂದಿನ ದಿನಗಳಲ್ಲಿ ಮತ್ತೆ ಇಬ್ಬಾಗವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಭವಿಷ್ಯ ನುಡಿದಿದ್ದಾರೆ. ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಸೋಲಾಗಿರಬಹುದು. ಬಿಜೆಪಿ ಗೆದ್ದಿರಬಹುದು. ಆದರೆ, ಪರಿಸ್ಥಿತಿ ಹೀಗೆ ಇರುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ ಅವು ಸರಿ ಹೋಗುತ್ತವೆ. ಆದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ನಮಗಿಂತಲೂ ಅವರಲ್ಲೇ ಹೆಚ್ಚು ಭಿನ್ನಾಭಿಪ್ರಾಯಗಳಿವೆ. ಬಿಜೆಪಿಯ ಪರಿಸ್ಥಿತಿ ಹೀಗೆ ಇರುವುದಿಲ್ಲ. 2013ರಲ್ಲಿ ಯಡಿಯೂರಪ್ಪ, ಶ್ರೀರಾಮುಲು ಅವರು ಪ್ರತ್ಯೇಕ ಪಕ್ಷ ಕಟ್ಟಿಕೊಂಡಿದ್ದಾಗ ಬಿಜೆಪಿ ಹೊಡೆದು ಚೂರಾಗಿತ್ತು.

ಮುಂದಿನ ದಿನಗಳಲ್ಲಿಯೂ ಅದೇ ರೀತಿಯ ವಾತಾವರಣ ನಿರ್ಮಾಣವಾಗಲಿದೆ. ಬೇರೆ ಬೇರೆ ಕಾರಣಗಳಿಂದ ಬಿಜೆಪಿಯ ಶಾಸಕರು ಅನ್ಯ ಪಕ್ಷಗಳತ್ತ ಮುಖ ಮಾಡುತ್ತಾರೆ. ಬಿಜೆಪಿಯಲ್ಲಿ ಮತ್ತೆ ಹೀನಾಯ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ನಾವು ಈಗಿನಿಂದಲೇ ಮುಂದಿನ ಚುನಾವಣೆಗಳ ತಯಾರಿ ಆರಂಭಿಸಿದ್ದೇವೆ. ಪಕ್ಷ ಸಂಘಟನೆಯತ್ತ ಗಮನ ಕೊಟ್ಟಿದ್ದೇವೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಾಗಿದೆ. ಆದರೆ, ಅದೇ ಅಂತಿಮ ಅಲ್ಲ. ಸಾಮಾನ್ಯವಾಗಿ ಆಡಳಿತಾರೂಢ ಪಕ್ಷಕ್ಕೆ ಉಪ ಚುನಾವಣೆಯಲ್ಲಿ ಗೆಲುವು ಆಗುತ್ತದೆ. ಅದೇ ರೀತಿಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿ ಹಿರಿಯ ನಾಯಕರ ಸಭೆ ನಡೆದಿರಲಿಲ್ಲ. ಬಹಳ ದಿನಗಳ ನಂತರ ಇಂದು ಸಭೆ ಕರೆಯಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Facebook Comments