ರಾಮನಗರ, ಫೆ.13- ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಎಲ್ಲರನ್ನೂ ಬಂಧಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲಾ ಎಸ್‍ಪಿ ಅವರಿಗೆ ಆಗ್ರಹ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರೈತರೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ವಿಚಾರವನ್ನು ಕುಮಾರಸ್ವಾಮಿ ಅವರ ಗಮನಕ್ಕೆ ಪಕ್ಷದ ಕಾರ್ಯಕರ್ತರು ತಂದಾಗ ಈ ಆಗ್ರಹ ಮಾಡಿದ್ದಾರೆ.
ಎಸ್‍ಪಿ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, 500 ಬಾಟಲ್ ಸಿಕ್ಕಿದವರನ್ನು ಜಾಮೀನಿನ ಮೇಲೆ ಬಿಡುತ್ತೀರಿ. 20 ಬಾಟಲ್ ಸಿಕ್ಕಿದವರನ್ನು ಜೈಲಿಗಟ್ಟುತ್ತೀರಿ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನೇ ನಿಲ್ಲಿಸಿ ಎಂದು ತಾಕೀತು ಮಾಡಿದ್ದಾರೆ.
ಪ್ರಾಮಾಣಿಕವಾಗಿ ಕೆಲಸ ಮಾಡಿ ಜನಹಿತ ಕಾಪಾಡಿ. ಇಲ್ಲದಿದ್ದರೆ ನಾನು ಕೂಡ ಕನಕಪುರದವರ ರೀತಿ ಮಾತನಾಡಬೇಕಾಗುತ್ತದೆ. ಚಿಕ್ಕಮಗಳೂರಿನಂತೆ ರಾಮನಗರದಲ್ಲಿ ನಡೆಯುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
