ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡಲು ಕೇಂದ್ರಕ್ಕೆ ಮನವರಿಕೆ

ಬೆಂಗಳೂರು,ಫೆ.22- ರಾಜ್ಯದ ಬಹು ನಿರೀಕ್ಷಿತ ಮೇಕೆದಾಟು ಮತ್ತು ಮಾರ್ಕಂಡೇಯ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಈ ಸಂಬಂಧ ಇಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಅವರು, ಕುಡಿಯುವ ನದಿನೀರು ಯೋಜನೆಗಳಾದ ಮೇಕೆದಾಟು ಮತ್ತು ಮಾರ್ಕೇಂಡೇಯ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ನಿನ್ನೆಯಷ್ಟೇ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಇಂದು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಎರಡು ಯೋಜನೆಗಳಿಗೆ ತುರ್ತಾಗಿ ಅನುಮತಿ ನೀಡಬೇಕೆಂದು ಕೋರಿದಾರೆ. ವೈಗೈ, ವೆಲ್ಲಾರು, ಗುಂಡಾರು ನದಿ ಜೋಡಣೆ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಿದರೆ ಕಾವೇರಿ ನದಿನೀರನ್ನು ಹೆಚ್ಚಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಇದರಿಂದ ಉಭಯ ರಾಜ್ಯಗಳ ನಡುವೆ ಮತ್ತಷ್ಟು ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೂ ಆದಷ್ಟು ಶೀಘ್ರ ಅನುಮತಿ ಕೊಡಬೇಕು. ಪ್ರಮುಖವಾಗಿ ಉತ್ತರ ಕರ್ನಾಟಕದ ಮಹದಾಯಿ ನದಿಯೋಜನೆಗೂ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.